ಪ್ರಯಾಗ್ರಾಜ್ (ಉತ್ತರಪ್ರದೇಶ) :ಹಿಂದುಗಳ ಮಹಾಸಂಗಮ ಎಂದೇ ಕರೆಯುವ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಕುಂಭ ಸ್ನಾನ ಪ್ರದೇಶದ 16ನೇ ಸೆಕ್ಟರ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಅಗ್ನಿಯನ್ನು ನಂದಿಸಲಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
"ಬೆಳಗ್ಗೆ 9.30 ರ ಸುಮಾರಿಗೆ ಕಿನ್ನರ್ ಅಖಾಡ ಉಳಿದುಕೊಂಡಿರುವ ಶಿಬಿರದ ಬಳಿ ಅಗ್ನಿಯಿಂದ ಹೊಗೆ ಏಳುತ್ತಿರುವುದನ್ನು ಟವರ್ನಲ್ಲಿ ವೀಕ್ಷಣೆ ಮಾಡುತ್ತಿದ್ದ ಸಿಬ್ಬಂದಿ ಕಂಡಿದ್ದಾರೆ. ತಕ್ಷಣವೇ ಈ ಬಗ್ಗೆ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು.
ಅಗ್ನಿಶಾಮಕ ದಳದ ವಾಹನಗಳು ಮತ್ತು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಸ್ಥಳಕ್ಕೆ ತೆರಳುವ ಹೊತ್ತಿಗೆ ಅಲ್ಲಿದ್ದ, ಜನರು ನೀರು ಮತ್ತು ಮರಳನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.