ಚಂಡೀಗಢ:ಇಂದು (ಶನಿವಾರ) ಕಿಸಾನ್ ಆಂದೋಲನವು 12 ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 11 ದಿನಗಳಿಂದ ಪಂಜಾಬ್ ಮತ್ತು ಹರಿಯಾಣದ ಗಡಿಯಲ್ಲಿ ರೈತರು ಎಂಎಸ್‌ಪಿ ಜಾರಿಗಾಗಿ ಪಟ್ಟು ಹಿಡಿದಿದ್ದಾರೆ. ''ಸದ್ಯ ರೈತರ ದೆಹಲಿ ಚಲೋ ಪಾದಯಾತ್ರೆ ನಡೆಸುವ ನಿರ್ಧಾರವನ್ನು ಫೆ.29ಕ್ಕೆ ಮುಂದೂಡಲಾಗಿದೆ. ಈ ನಿಟ್ಟಿನಲ್ಲಿ ಯಾವ ತಂತ್ರ ರೂಪಿಸಬೇಕು ಎಂಬ ಬಗ್ಗೆ ಅದೇ ದಿನ ನಿರ್ಧಾರ ಕೈಗೊಳ್ಳುವುದು ಎಂದು ರೈತ ಮುಖಂಡ ಸರ್ವಾನ್ ಪಂಧೇರ್ ತಿಳಿಸಿದ್ದಾರೆ.
''ಎಂಎಸ್‌ಪಿ ಗ್ಯಾರಂಟಿ ಕಾನೂನು ಮಾಡುವ ಕುರಿತು ಮಾತುಕತೆ ನಡೆಸಲಾಗುವುದು ಎಂದು ಮಾತುಕತೆಯ ಆಹ್ವಾನ ಪತ್ರಿಕೆಯಲ್ಲಿ ಸ್ಪಷ್ಟವಾಗಿ ಬರೆಯಬೇಕು. ಆದರೆ, ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಮಾತುಕತೆಗೆ ಆಹ್ವಾನ ಬಂದಿಲ್ಲ. ಕೇಂದ್ರ ಸರ್ಕಾರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ'' ಎಂದು ಕಿಡಿಕಾರಿದರು.
ದೇಶಾದ್ಯಂತ ಇಂದು ಕ್ಯಾಂಡಲ್ ಮೆರವಣಿಗೆ:ಯುವ ರೈತ ಶುಭಕರನ್ ಅವರ ಸಾವು ಖಂಡಿಸಿ ರೈತರಿಂದ ಇಂದು (ಶನಿವಾರ) ದೇಶಾದ್ಯಂತ ಕ್ಯಾಂಡಲ್ ಮೆರವಣಿಗೆ ನಡೆಸಲಾಗುವುದು. ಇದಲ್ಲದೇ ಫೆ.26ರಂದು ರೈತರ ಪರವಾಗಿ ಬುಡಕಟ್ಟು ಸಮಾಜದದಿಂದ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದಲ್ಲಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರೈತರು ಬೇಡಿಕೆಗಳು: ಖಾನೂರಿ ಗಡಿಯಲ್ಲಿ ಹುತಾತ್ಮರಾದ ಬಟಿಂಡಾದ ಯುವ ರೈತ ಶುಭಕರನ್ ಅವರ ಅಂತ್ಯಕ್ರಿಯೆಯನ್ನು ಇನ್ನೂ ನೆರವೇರಿಸಲಾಗಿಲ್ಲ. ಪಂಜಾಬ್ ಸರ್ಕಾರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಘೋಷಣೆ ಮಾಡಬೇಕು. ಈ ಪ್ರಕರಣದ ಕುರಿತು ಪಂಜಾಬ್ ಪೊಲೀಸರು ಕೊಲೆಯ ಎಫ್‌ಐಆರ್ ದಾಖಲಿಸಬೇಕು ಎಂದು ರೈತ ಸಂಘಟನೆಗಳು ಮತ್ತು ಕುಟುಂಬಗಳು ಒತ್ತಾಯಿಸುತ್ತಿವೆ.
ಯುಕ್ತ್ ಕಿಸಾನ್ ಮೋರ್ಚಾ(ರಾಜಕೀಯೇತರ), ಕಿಸಾನ್ ಮಜ್ದೂರ್ ಮೋರ್ಚಾದ ಮುಂದಿನ ಕಾರ್ಯಕ್ರಮಗಳು:
- ಶಹೀದ್ ಶುಭಕರನ್ ಸಿಂಗ್ ಮತ್ತು ಇತರ ಮೂವರು ಹುತಾತ್ಮ ರೈತರ ಸ್ಮರಣಾರ್ಥ ಫೆಬ್ರವರಿ 24ರ ಸಂಜೆ ದೇಶಾದ್ಯಂತ ಕ್ಯಾಂಡಲ್ ಮಾರ್ಚ್ ನಡೆಯಲಿದೆ.
- ಫೆಬ್ರವರಿ 25 ರಂದು ಶಂಭು ಮತ್ತು ಖಾನೂರಿ ಗಡಿಯಲ್ಲಿ ಡಬ್ಲ್ಯೂಟಿಒ ಸಮಾವೇಶದ ಮೂಲಕ ದೇಶಾದ್ಯಂತ ರೈತರಿಗೆ ಅರಿವು ಮೂಡಿಸಲಾಗುವುದು.
- ಫೆಬ್ರವರಿ 26 ರಂದು ಬೆಳಗ್ಗೆ ದೇಶದ ಎಲ್ಲ ಹಳ್ಳಿಗಳಲ್ಲಿ ಡಬ್ಲ್ಯೂಟಿಒದ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ. ನಂತರ ಮಧ್ಯಾಹ್ನ 3 ಗಂಟೆಗೆ ಶಂಭು ಮತ್ತು ಖಾನೂರಿ ಗಡಿಯಲ್ಲಿ ಡಬ್ಲ್ಯೂಟಿಒದ ದೊಡ್ಡ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ.
- ಫೆ.27 ರಂದು ಶಂಭು ಹಾಗೂ ಖಾನೂರಿ ಗಡಿಯಲ್ಲಿ ಎರಡೂ ವೇದಿಕೆಗಳ ರಾಷ್ಟ್ರೀಯ ಮಟ್ಟದ ಸಭೆ ನಡೆಯಲಿದೆ. ಫೆ.28 ರಂದು ಈ ಎರಡೂ ವೇದಿಕೆಗಳ ಜಂಟಿ ಸಭೆ ನಡೆಸಿ, ಫೆ.29ರಂದು ರೈತ ಚಳವಳಿಯ ಮುಂಬರುವ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗುವುದು.
ಕರಾಳ ದಿನ ಆಚರಣೆ:ನಿನ್ನೆ ಶುಕ್ರವಾರ ದೇಶಾದ್ಯಂತ ಕರಾಳ ದಿನ ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ರೈತರು ಮುಖ್ಯಮಂತ್ರಿ ಮನೋಹರ್ ಲಾಲ್ ಹಾಗೂ ಕೇಂದ್ರ ಸಚಿವರ ಪ್ರತಿಕೃತಿಗಳು ದಹಿಸಿದರು. ಹರಿಯಾಣದಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ರೈತರು ಹಿಸಾರ್‌ನ ನಾರ್ನಾಂಡ್‌ನಿಂದ ಖಾನೂರಿ ಗಡಿಗೆ ಹೋಗಲು ಬಯಸಿದ್ದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರು. ಇದನ್ನು ಕಂಡ ರೈತರು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ, ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಘರ್ಷಣೆಯಲ್ಲಿ 24 ಪೊಲೀಸರು ಮತ್ತು 16 ರೈತರು ಗಾಯಗೊಂಡಿದ್ದಾರೆ. ಹಲವು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:’ಯಾವುದೇ ಕಾರಣಕ್ಕೂ ಉಚಿತವಾಗಿ ವಿದ್ಯುತ್ ನೀಡುವುದಕ್ಕೆ ಆಗೋದಿಲ್ಲ‘: ಹೀಗೆ ಹೇಳಿದ್ದು ಯಾರು ಗೊತ್ತಾ?