ನವದೆಹಲಿ/ಚಂಡೀಗಢ:ರೈತರ ದೆಹಲಿ ಚಲೋ ಪ್ರತಿಭಟನೆಯು ರಾಷ್ಟ್ರ ರಾಜಧಾನಿಗೆ ಸಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಇತ್ತ ಚಂಡೀಗಢದಲ್ಲಿ ಬ್ಯಾರಿಕೇಡ್ಗಳನ್ನು ಮುರಿಯಲು ಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ಇಂದು ರಾಷ್ಟ್ರ ರಾಜಧಾನಿಗೆ ರೈತರ ಪಾದಯಾತ್ರೆ ಬರುತ್ತಿದ್ದು, ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿರುವ ಕೇಂದ್ರ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸಲು ತಾತ್ಕಾಲಿಕ ಜೈಲನ್ನು ರಚಿಸಲು ಸೂಚಿಸಿದೆ.
ಅದರಂತೆ, ದಿಲ್ಲಿಯ ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸಲು ಸೂಚಿಸಿದ್ದ ಕೇಂದ್ರದ ಪ್ರಸ್ತಾಪವನ್ನು ದೆಹಲಿಯ ಗೃಹ ಸಚಿವ ಕೈಲಾಶ್ ಗಹ್ಲೋಟ್ ಅವರು ನಿರಾಕರಿಸಿ, ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಜೊತೆಗೆ ರೈತರ ಪ್ರತಿಭಟನೆಗೆ ಸರ್ಕಾರ ಬೆಂಬಲ ನೀಡಲಿದೆ ಎಂದಿದ್ದಾರೆ.
ರೈತರ ಬೇಡಿಕೆಗಳು ಸಮಂಜಸವಾಗಿವೆ. ಶಾಂತಿಯುತ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕಾಗಿದೆ. ಆದ್ದರಿಂದ ರೈತರನ್ನು ಬಂಧಿಸುವುದು ಸರಿಯಲ್ಲ. ಸ್ಟೇಡಿಯಂ ಅನ್ನು ಜೈಲಾಗಿ ಪರಿವರ್ತಿಸುವ ಕೋರಿಕೆಗೆ ತಮ್ಮ ಸರ್ಕಾರದ ಸಮ್ಮತಿ ಇಲ್ಲ ಎಂದು ಗೆಹ್ಲೋಟ್ ಪತ್ರದಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ರೈತರ ಜೊತೆಗೆ ಮಾತುಕತೆ ನಡೆಸಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ದೇಶದ ರೈತರು ನಮ್ಮ ಅನ್ನದಾತರು. ಅವರನ್ನು ಬಂಧಿಸುವ ಮೂಲಕ ಗಾಯಕ್ಕೆ ಉಪ್ಪು ಸವರಿದಂತಾಗುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಆಪ್ ಸರ್ಕಾರದ ಬೆಂಬಲವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಶ್ರುವಾಯು ಶೆಲ್ ಪ್ರಯೋಗ:ಚಂಡೀಗಢದ ಅಂಬಾಲಾದ ಶಂಭು ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ರೈತರ ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕರ ಗುಂಪೊಂದು ಮುರಿಯಲು ಯತ್ನಿಸಿದಾಗ ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಎಸೆದಿದ್ದಾರೆ.
ಬ್ಯಾರಿಕೇಡ್‌ಗಳಿಂದ ದೂರವಿರಲು ಹರಿಯಾಣ ಪೊಲೀಸರು ಸೂಚಿಸಿದರೂ, ಅನೇಕ ಯುವಕರು ಬ್ಯಾರಿಕೇಡ್‌ಗಳ ಮೇಲೆ ನಿಂತಿದ್ದರು. ಕೆಲವರು ಕಬ್ಬಿಣದ ಬ್ಯಾರಿಕೇಡ್ ಅನ್ನು ಮುರಿದು ಸೇತುವೆಯಿಂದ ಘಗ್ಗರ್ ನದಿಗೆ ಎಸೆಯಲು ಪ್ರಯತ್ನಿಸಿದರು. ಇದರಿಂದ ಪೊಲೀಸರು ಹಲವಾರು ಸುತ್ತಿನ ಅಶ್ರುವಾಯು ಶೆಲ್‌ಗಳನ್ನು ಎಸೆದರು. ರೈತರ ಮೇಲೆ ಅಶ್ರುವಾಯು ಸೆಲ್ ಬಳಸಲು ಡ್ರೋನ್ಗಳನ್ನು ಬಳಸಿಕೊಳ್ಳಲಾಯಿತು.
ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲಮನ್ನಾ, ಈ ಹಿಂದಿನ ಹೋರಾಟದ ವೇಳೆ ರೈತರ ಮೇಲೆ ಹಾಕಲಾದ ಪ್ರಕರಣಗಳನ್ನು ಹಿಂಪಡೆಯುವುದು, ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಂಜಾಬ್, ಹರಿಯಾಣ, ಉತ್ತರಪ್ರದೇಶದ 200ಕ್ಕೂ ಅಧಿಕ ರೈತ ಸಂಘಟನೆಗಳು ದೆಹಲಿ ಚಲೋ ಹೋರಾಟ ನಡೆಸುತ್ತಿವೆ.
ಇದನ್ನೂ ಓದಿ:ದೆಹಲಿ ಚಲೋ; ಪಂಜಾಬ್ ಗಡಿಯಲ್ಲಿ ಸಿಮೆಂಟ್ ಬ್ಲಾಕ್ಗಳನ್ನು ನದಿಗೆ ಎಸೆದ ರೈತರು