ಪುಣೆ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಮನೆಯಿಂದ ಓಡಿಹೋಗಿ, ಲೊಕೇಶನ್ ಕಳುಹಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ತಿಂಡಿ ತಿನಿಸು ವ್ಯಾಪಾರಿ ಶ್ರೀಕಾಂತ್ ವಿ ದೇಶಮುಖ್ ಮೃತ ವ್ಯಕ್ತಿ.
ಘಟನೆಯ ವಿವರ: ತಿಂಡಿ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುವ ಶ್ರೀಕಾಂತ್ ದೇಶಮುಖ್ ಪುಣೆಯ ಧಂಕಾವಾಡಿಯ ನಿವಾಸಿ. ಭಾನುವಾರ ಬೆಳಗ್ಗೆ ಪತ್ನಿಯೊಂದಿಗೆ ಯಾವುದೋ ವಿಷಯಕ್ಕೆ ತೀವ್ರ ವಾಗ್ವಾದ ನಡೆದಿದೆ. ಅದೇ ಸಿಟ್ಟಿನಲ್ಲಿ ಆತ ಕಾರಿನ ಕೀ ತೆಗೆದುಕೊಂಡು ಹೊರಗೆ ಹೋಗಿದ್ದಾನೆ. ಮನೆಯಿಂದ ಸುಮಾರು 75 ಕಿಮೀ ಕಾರು ಡ್ರೈವ್ ಮಾಡಿಕೊಂಡು ಊರ ಹೊರಗೆ ಬಂದಿದ್ದಾನೆ.
ನಂತರ ರಾಯ್ಗಡ್ ಜಿಲ್ಲೆಯ ವರಂಧಾ ಘಾಟ್ ತಲುಪಿ ಅಲ್ಲಿಂದ ಪತ್ನಿಗೆ ಲೊಕೇಶನ್ ಸೆಂಡ್ ಮಾಡಿದ್ದಾನೆ. ಜೊತೆಗೆ "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಟಕ್ಸ್ಟ್ ಕೂಡಾ ಮಾಡಿದ್ದಾನೆ. ಇದರಿಂದ ಗಾಬರಿಯಾದ ಪತ್ನಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಪೊಲೀಸರು ಆತನ ಲೊಕೇಶನ್ ಅನ್ನು ಅಲ್ಲಿಗೆ ಸನಿಹದ ಭೋರ್ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸರ ಹೇಳಿಕೆ: "ದೇಶಮುಖ್ ಅವರನ್ನು ಪತ್ತೆಹಚ್ಚಲು ನಾವು ತಕ್ಷಣ ರಕ್ಷಣಾ ತಂಡವನ್ನು ರಚಿಸಿದೆವು. ನಮ್ಮ ಪೊಲೀಸ್ ಠಾಣೆಯಿಂದ 45 ಕಿ.ಮೀ ದೂರದಲ್ಲಿರುವ ಅವರ ಪತ್ನಿ ಸೂಚಿಸಿದ ಸ್ಥಳಕ್ಕೆ ತಲುಪಿದೆವು. ಆದರೆ, ದೇಶಮುಖ ಅಲ್ಲಿ ಕಾಣಲಿಲ್ಲ. ನಂತರ ಅಲ್ಲಿಂದ 5 ಕಿಲೋಮೀಟರ್ ದೂರದಲ್ಲಿ ಅವರ ಕಾರು ಪತ್ತೆಯಾಯಿತು" ಎಂದು ಪೊಲೀಸ್ ಅಧಿಕಾರಿ ಪವಾರ್ ಹೇಳಿದರು.
ದೇಶಮುಖ್ ಅವರ ಪತ್ತೆಗಾಗಿ ಸಹಾಯ ಮಾಡಲು ಜಿಲ್ಲೆಯ ಇತರ ಅಧಿಕಾರಿಗಳು ಮತ್ತು ಭೋಯಿರಾಜ್ ಮಂದಾ ಸಂಸ್ಥೆಯ ಸ್ವಯಂಸೇವಕರನ್ನು ಪೊಲೀಸರು ಸ್ಥಳಕ್ಕೆ ಕರೆಸಿದ್ದರು. ಸಣ್ಣ ಸೇತುವೆಯೊಂದರ ಕೆಳಗೆ ಉಕ್ಕಿ ಹರಿಯುತ್ತಿರುವ ನದಿಗೆ ದೇಶಮುಖ ಹಾರಿರಬಹುದು ಎಂಬ ಶಂಕೆಯಿಂದ ಹುಡುಕಾಟ ಆರಂಭಿಸಲಾಗಿತ್ತು. ಒಂದೆರಡು ಗಂಟೆಗಳ ನಂತರ ವರಂಧಾ ಘಾಟ್ ಮೂಲಕ ಹಾದುಹೋಗುವ ನದಿಯಲ್ಲಿ ದೇಶಮುಖ್ ಅವರ ಶವ ಪತ್ತೆಯಾಯಿತು. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಶವವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ಪೊಲೀಸರು ಆಕಸ್ಮಿಕ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಅಗಲಿರುವ ದೇಶಮುಖ್ ಅವರ ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಅಕ್ರಮ ಸಂಬಂಧ ಆರೋಪ: ಪತ್ನಿಯ ತಲೆ ಕಡಿದು ಪೊಲೀಸ್ ಠಾಣೆಯತ್ತ ತಂದ ಪತಿ! - husband beheading his wife