ಹೈದರಾಬಾದ್:ಉದ್ಧವ್ ಠಾಕ್ರೆ ಬಣದ ಶಿವಸೇನಾ ಅಭ್ಯರ್ಥಿ ಅನಿಲ್ ದೇಸಾಯಿ ಅವರ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂಬ ವಿಡಿಯೋ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ ಎಂಬುದು ಫ್ಯಾಕ್ಟ್ ಚೆಕ್ನಲ್ಲಿ ತಿಳಿದುಬಂದಿದೆ.
ಹಸಿರು ಧ್ವಜವು ಹಾರಾಡುತ್ತಿರುವ ವೈರಲ್ ವೀಡಿಯೊವನ್ನು ಬಿಜೆಪಿ ನಾಯಕ ನೀಲೇಶ್ ರಾಣೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಉದ್ಧವ್ ಸೇನಾ ಬಣದಲ್ಲಿ ಪಾಕಿಸ್ತಾನದ ಧ್ವಜ! ಈಗ PFI, SIMI, AL QAEDA ದ ಜನರು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಬಾಳಾಸಾಹೇಬ್ ಠಾಕ್ರೆ ಅವರ ನಿಜವಾದ ಮುಖವಾಡ ಎಂದು ಮರಾಠಿ ಭಾಷೆಯಲ್ಲಿ ಬರೆದುಕೊಂಡಿದ್ದರು.
ಇದರ ಬಳಿಕ ಈ ವಿಡಿಯೋ ಭಾರೀ ಪ್ರಮಾಣದಲ್ಲಿ ವೈರಲ್ ಆಗಿತ್ತು. ಹಲವರು ಇದೇ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಚೆಂಬೂರಿನಲ್ಲಿ ಯುಬಿಟಿ ಅಭ್ಯರ್ಥಿ ಅನಿಲ್ ದೇಸಾಯಿ ಅವರ ಪ್ರಚಾರದ ವಿಡಿಯೋ. ಭಾರತದಲ್ಲಿ ಪಾಕಿಸ್ತಾನದ ಧ್ವಜ. ಇವರ ಹತಾಶೆಯ ಪ್ರಮಾಣ ನೋಡಿ. ಇದನ್ನು ಕಂಡಿದ್ದರೆ ಬಾಳಾಸಾಹೇಬ್ ಠಾಕ್ರೆ ಹೇಗೆ ಭಾವಿಸುತ್ತಾರೆ. ಸಂಜಯ್ ರಾವುತ್ ಮತ್ತು ಆದಿತ್ಯ ಠಾಕ್ರೆ ಅವರು ಶಿವಸೇನೆಯನ್ನೂ ನೆಲಸಮ ಮಾಡಲಿದ್ದಾರೆ. ಇದಕ್ಕೆ ಮಹಾರಾಷ್ಟ್ರದ ಮತದಾರರು ಸೂಕ್ತ ಉತ್ತರವನ್ನು ನೀಡುತ್ತಾರೆ ಎಂದು ಬರೆದುಕೊಳ್ಳಲಾಗಿದೆ.
ಫ್ಯಾಕ್ಟ್ ಚೆಕ್ನಲ್ಲಿ ಏನಿದೆ?:ಈ ವಿಡಿಯೋದ ಫ್ಯಾಕ್ಟ್ ಚೆಕ್ ನಡೆಸಿದಾಗ, ಮುಂಬೈನ ಚೆಂಬೂರಿನಲ್ಲಿ ಶಿವಸೇನೆ (ಯುಬಿಟಿ) ನಾಯಕ ಅನಿಲ್ ದೇಸಾಯಿ ಅವರ ರೋಡ್ ಶೋನ ವೈರಲ್ ವಿಡಿಯೋದಲ್ಲಿ ಬಳಸಲಾದ ಧ್ವಜವು ಇಸ್ಲಾಮಿಕ್ ಮತದ ಧ್ವಜವಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹರಿದಾಡುತ್ತಿರುವ ಪಾಕಿಸ್ತಾನದ ಧ್ವಜ ಅಲ್ಲ ಎಂಬುದು ಗೊತ್ತಾಗಿದೆ.
ವಿಡಿಯೋದಲ್ಲಿರುವ ಧ್ವಜವು ಹಸಿರು ಬಣ್ಣ ಮತ್ತು ಅರ್ಧಚಂದ್ರನ ಗುರುತನ್ನು ಹೊಂದಿದೆ. ಆದರೆ, ಇದು ಪಾಕಿಸ್ತಾನದ ಧ್ವಜವಲ್ಲ. ಮೊಹರಂ ಮತ್ತು ಈದ್ ಮಿಲಾದ್ ಮೆರವಣಿಗೆಗಳಲ್ಲಿ ಬಳಸುವ ಧ್ವಜವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿನ ಧ್ವಜದ ಮೇಲೆ ಬಿಳಿ ಚುಕ್ಕೆಗಳಿವೆ. ಆದರೆ, ಪಾಕಿಸ್ತಾನದ ರಾಷ್ಟ್ರೀಯ ಧ್ವಜವು ಎಡಭಾಗದಲ್ಲಿ ಬಿಳಿ ಗೆರೆಯನ್ನು ಹೊಂದಿದೆ.