ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಎರಡೇ ದಿನಗಳು ಬಾಕಿದ್ದು, ಭರದ ಸಿದ್ಧತೆಗಳು ನಡೆಯುತ್ತಿದೆ. ದೇಗುಲದ ಮುಖ್ಯ ಆಕರ್ಷಣೆಯಾದ ರಾಮ ಲಲ್ಲಾ ಮೂರ್ತಿಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ನಡುವೆ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗಲಿರುವ ದೇವರ ವಿಗ್ರಹದ ಪೂರ್ಣ ಮೊಗದ ಚಿತ್ರ ಬಹಿರಂಗವಾಗಿತ್ತು. ಆದರೆ, ಇದು ನಿಜವಾದ ರಾಮ ಲಲ್ಲಾ ರೂಪವಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಅಯೋಧ್ಯೆಯ ರಾಮನ ವಿಗ್ರಹದ ಕುರಿತು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಧಾನ ಅರ್ಚಕರು, ಪ್ರಾಣ ಪ್ರತಿಷ್ಠಾ ಪೂರ್ಣಗೊಳ್ಳುವ ಮೊದಲೇ ಶ್ರೀರಾಮನ ವಿಗ್ರಹದ ನೇತ್ರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಶ್ರೀರಾಮನ ನೇತ್ರಗಳು ಕಾಣಿಸುವ ವಿಗ್ರಹದ ಚಿತ್ರವು ನೈಜವಲ್ಲ. ನೇತ್ರಗಳ ಕಾಣಿಸುವ ಮೂರ್ತಿಯ ಚಿತ್ರವನ್ನು ಯಾರು ಬಹಿರಂಗಪಡಿಸಿದ್ದಾರೆ?, ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಎಲ್ಲ ಕಾರ್ಯವಿಧಾನಗಳನ್ನು ಎಂದಿನಂತೆ ನಡೆಸಲಾಗುತ್ತದೆ. ಆದರೆ, ಪ್ರಾಣ ಪ್ರತಿಷ್ಠಾದವರೆಗೂ ರಾಮ ಲಲ್ಲಾನ ನೇತ್ರಗಳು ಬಹಿರಂಗಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು. ಇದೇ ವೇಳೆ, ಶ್ರೀರಾಮ ಲಲ್ಲಾನ ಗುಡಿಯ ವಿಗ್ರಹವನ್ನು ದೇವಸ್ಥಾನಕ್ಕೆ ಕೊಂಡೊಯ್ಯುವ ವಿಧಾನಗಳ ಕುರಿತು ಪ್ರತಿಕ್ರಿಯಿಸಿದ ಅವರು, ಹೊಸ ವಿಗ್ರಹವು ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಇದಕ್ಕೆ ಶುಭ ಮುಹೂರ್ತವೂ ಇಲ್ಲ. ಹೊಸದನ್ನು ಮಾಡುವಾಗಲೇ ಮಂಗಳಕರ ಸಮಯವನ್ನು ಮುನ್ಸೂಚಿಸಲಾಗುತ್ತದೆ. ಇದು ಒಂದು ಕಾರ್ಯವಿಧಾನವಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಆಚಾರ್ಯ ಸತ್ಯೇಂದ್ರ ದಾಸ್, ದೇವಸ್ಥಾನದೊಳಗೆ ವಿಗ್ರಹವನ್ನು ಯಾರು ಒಯ್ಯುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳು ಟೆಂಟ್‌ನಿಂದ ತಾತ್ಕಾಲಿಕವಾಗಿ ನಿರ್ಮಿಸಲಾದ ದೇವಾಲಯಕ್ಕೆ ವಿಗ್ರಹವನ್ನು ಕೊಂಡೊಯ್ದಿದ್ದರು. ಈಗ ಸಿಎಂ ಯೋಗಿ ಅವರೇ ಮೂರ್ತಿಯನ್ನು ದೇವಸ್ಥಾನಕ್ಕೆ ಕೊಂಡೊಯ್ಯಬಹುದು. ದೇವರ ಅನುಷ್ಠಾನ ಮಾಡುವವರು ನೆಲದ ಮೇಲೆ ಮಲಗಬೇಕು. ಸುಳ್ಳು ಹೇಳಬಾರದು, ಗಾಯತ್ರಿ ಮಂತ್ರದಂತಹ ಮಂತ್ರಗಳನ್ನು ಪಠಿಸಬೇಕು. ಎಲೆಯಲ್ಲಿ ತಿಂದು ಬ್ರಹ್ಮಚರ್ಯ ಪಾಲಿಸಬೇಕು ಎಂದು ವಿವರಿಸಿದರು.
ಜ.22ರಂದು ದೇವರ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ವಿಧಿವಿಧಾನಗಳು ನಡೆಯಲಿವೆ. ಭಾರತೀಯ ಆಧ್ಯಾತ್ಮಿಕತೆ, ಧರ್ಮ, ಪಂಥಗಳು ಸೇರಿದಂತೆ 150ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರು, ಮಹಾಮಂಡಲೇಶ್ವರ, ಮಂಡಲೇಶ್ವರ, ಶ್ರೀಮಹಾಂತ್, ಮಹಂತ್, ನಾಗಾ ಸೇರಿದಂತೆ 50ಕ್ಕೂ ಹೆಚ್ಚು ಬುಡಕಟ್ಟು, ಗಿರಿವಾಸಿ, ತತ್ವಸಿ, ಬುಡಕಟ್ಟು ಸಂಪ್ರದಾಯಗಳ ದ್ವೀಪವಾಸಿಗಳ ಆಚಾರ್ಯರು ಮತ್ತು ವಿವಿಧ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದಾರೆ.