ನಾಗ್ಪುರ(ಮಹಾರಾಷ್ಟ್ರ):ವಾಯುಪಡೆಯ ಅತೀ ಪ್ರಮುಖ ಅಸ್ತ್ರವಾದ ಬ್ರಹ್ಮೋಸ್ ಕ್ಷಿಪಣಿ ತಯಾರಿಕೆಯ ಗುಪ್ತ ಮಾಹಿತಿಯನ್ನು ಪಾಕಿಸ್ತಾನದ ಜೊತೆ ಹಂಚಿಕೊಂಡ ಗಂಭೀರ ಆರೋಪದ ಸಾಬೀತಾದ ಹಿನ್ನೆಲೆಯಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಜಿ ಎಂಜಿನಿಯರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮಾಜಿ ಎಂಜಿನಿಯರ್ ಆಗಿರುವ ನಿಶಾಂತ್ ಅಗರ್ವಾಲ್ ಆರೋಪಿ. ಈತನಿಗೆ ನಾಗಪುರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಜೊತೆಗೆ 14 ವರ್ಷಗಳ ಕಠಿಣ ಜೈಲು ಮತ್ತು ಹೆಚ್ಚುವರಿಯಾಗಿ 3 ಸಾವಿರ ರೂಪಾಯಿ ದಂಡ ವಿಧಿಸಿ ಸೋಮವಾರ ಆದೇಶಿಸಿತು. ಆರೋಪಿ ಎಂಜಿನಿಯರ್ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್ಐ ಪರ ಗೂಢಚಾರಿಕೆ ನಡೆಸಿದ್ದ.
ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ತಾಂತ್ರಿಕ ಸಂಶೋಧನಾ ವಿಭಾಗದ ಎಂನಿಜಿಯರ್ ಆಗಿದ್ದ ನಿಶಾಂತ್ ಅಗರ್ವಾಲ್ರನ್ನು ನಾಗಪುರದಲ್ಲಿ ಇರುವ ಕ್ಷಿಪಣಿ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಆತ ಪಾಕಿಸ್ತಾನದ ಐಎಸ್ಐ ಜೊತೆಗೆ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಶಾಂತ್ ಅಗರ್ವಾಲ್ರನ್ನು 2018 ರಲ್ಲಿ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.