ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ಈ ಭಾಷೆಗಳು ಈಗಾಗಲೇ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದಿರುವ ಇತರ ಆರು ಭಾಷೆಗಳ ಗುಂಪಿಗೆ ಸೇರ್ಪಡೆ ಆಗುತ್ತವೆ. ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಗಳೆಂದು ಘೋಷಿಸಿದೆ.
ಮಹಾರಾಷ್ಟ್ರ (ಮರಾಠಿ), ಬಿಹಾರ, ಉತ್ತರ ಪ್ರದೇಶ, ಮತ್ತು ಮಧ್ಯಪ್ರದೇಶ (ಪಾಲಿ ಮತ್ತು ಪ್ರಾಕೃತ), ಪಶ್ಚಿಮ ಬಂಗಾಳ (ಬಂಗಾಳಿ), ಮತ್ತು ಅಸ್ಸಾಂ (ಅಸ್ಸಾಮಿ)ಭಾಷೆಗಳನ್ನು ಇನ್ಮುಂದೆ ಶಾಸ್ತ್ರೀಯ ಭಾಷೆಗಳೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ . ಈ ಮನ್ನಣೆಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಣಾಮಗಳು ಪ್ರತಿಧ್ವನಿಸಲು ಸಹಕಾರಿಯಾಗಿದೆ.
ಶಾಸ್ರ್ತೀಯ ಭಾಷಾ ಘೋಷಣೆಯಿಂದಾಗುವ ಪ್ರಯೋಜನಗಳೇನು?:ಈ ಶಾಸ್ತ್ರೀಯ ಭಾಷೆಗಳನ್ನು ಬೆಂಬಲಿಸಲು, ಶಿಕ್ಷಣ ಸಚಿವಾಲಯವು ಶಾಸ್ತ್ರೀಯ ಭಾಷೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳು, ವಿಶ್ವವಿದ್ಯಾನಿಲಯಗಳಲ್ಲಿ ಪೀಠಗಳ ಸ್ಥಾಪನೆ ಮತ್ತು ಈ ಭಾಷೆಗಳ ಪ್ರಚಾರಕ್ಕಾಗಿ ಮೀಸಲಾದ ಕೇಂದ್ರಗಳ ರಚನೆಯಂತಹ ಪ್ರಯೋಜನಗಳನ್ನು ಒದಗಿಸುತ್ತದೆ.
ಈ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವುದರ ಪ್ರಮುಖ ಪ್ರಯೋಜನ ಎಂದರೆ ಉದ್ಯೋಗ ಸೃಷ್ಟಿ ಮಾಡುವುದಾಗಿದೆ. ಭಾಷೆಗಳನ್ನು ಶಾಸ್ತ್ರೀಯ ಭಾಷೆಯಾಗಿ ಸೇರಿಸುವುದರಿಂದ ವಿಶೇಷವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದಲ್ಲದೇ, ಈ ಭಾಷೆಗಳ ಪ್ರಾಚೀನ ಪಠ್ಯಗಳ ಸಂರಕ್ಷಣೆ, ದಾಖಲೀಕರಣ ಮತ್ತು ಡಿಜಿಟಲೀಕರಣ, ಅನುವಾದ, ಪ್ರಕಾಶನ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.