ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, 2024ರ ಲೋಕಸಭೆ ಚುನಾವಣೆಯ ನಿರೀಕ್ಷಿತ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಚುನಾವಣಾ ಆಯುಕ್ತ ಅರುಣ್ ಗೋಯಲ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚುನಾವಣಾ ಆಯುಕ್ತರಾಗಿ ಗೋಯಲ್ ಅವರ ನಿರ್ಗಮನದ ಕಾರಣವನ್ನು ಉಲ್ಲೇಖಿಸದೇ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯವು ತನ್ನ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. "ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯಿದೆ, 2023 ರ ಸೆಕ್ಷನ್ 11 ರ ಷರತ್ತು (1) ರ ಅನುಸಾರವಾಗಿ, ಅರುಣ್ ಗೋಯಲ್ ಅವರು ಚುನಾವಣೆಗೆ ಸಲ್ಲಿಸಿದ ರಾಜೀನಾಮೆಯನ್ನು 09 ಮಾರ್ಚ್ 2024 ರಿಂದ ಜಾರಿಗೆ ಬರುವಂತೆ ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಅರುಣ್ ಗೋಯಲ್ ಅವರ ಅಧಿಕಾರಾವಧಿ ಡಿಸೆಂಬರ್ 2027 ರವರೆಗೆ ಇತ್ತು. ಅವರು ತಮ್ಮ ಹುದ್ದೆಯಿಂದ ಏಕೆ ಕೆಳಗಿಳಿದಿದ್ದಾರೆ ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗೋಯಲ್ ಅವರು ಪಂಜಾಬ್ ಕೇಡರ್‌ನ 1985-ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಅವರು ನವೆಂಬರ್ 2022 ರಲ್ಲಿ ಚುನಾವಣಾ ಆಯೋಗಕ್ಕೆ ನೇಮಕಗೊಂಡಿದ್ದರು. ಫೆಬ್ರವರಿಯಲ್ಲಿ ಅನುಪ್ ಪಾಂಡೆ ನಿವೃತ್ತಿ ಮತ್ತು ಗೋಯಲ್ ಅವರ ರಾಜೀನಾಮೆಯ ನಂತರ, ಮೂವರು ಸದಸ್ಯರ EC ಸಮಿತಿಯು ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಮಾತ್ರ ಹೊಂದಿದೆ.