ಮುಂಬೈ, ಮಹಾರಾಷ್ಟ್ರ; ನಿನ್ನೆಯಷ್ಟೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಆಯ್ಕೆ ಆಗಿದ್ದಾರೆ. ಅಷ್ಟೇ ಅಲ್ಲ ಕಳೆದ 10 ದಿನಗಳಿಂದ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದ್ದು, ಫಡ್ನವೀಸ್ ಅವರೇ ಮಹಾರಾಷ್ಟ್ರ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಇಂದು ಅವರು ಆಜಾದ್ ಮೈದಾನದಲ್ಲಿ ನೂತನ ಸಿಎಂ ಆಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನು ಟೇಕ್ಕೇರ್ ಸಿಎಂ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಬುಧವಾರ ಅಭಿನಂದಿಸಿದ್ದಾರೆ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿತ್ತು. ನವೆಂಬರ್ 20 ರಂದು ರಾಜ್ಯದ ಎಲ್ಲ 288 ಕ್ಷೇತ್ರಗಳಿಗೆ ಮತದಾನ ನಡೆದರೆ, ನವೆಂಬರ್ 23 ರಂದು ಫಲಿತಾಂಶ ಹೊರ ಬಿದ್ದಿತ್ತು. ಇದಾಗಿ 10 ದಿನಗಳ ಬಳಿಕ ಮಹಾ ಸಿಎಂ ಕುರ್ಚಿಗೆ ಯಾರು ಎಂಬ ಗೊಂದಲಗಳಿಗೆ ನಿನ್ನೆ ಅಂತಿಮ ತೆರೆ ಬಿದ್ದಿದೆ.
ಎಲ್ಲ ಊಹಾಪೋಹಗಳಿಗೆ ತೆರೆ:ಅಷ್ಟೇ ಅಲ್ಲ ಮಹಾ ಸಿಎಂ ಪೋಸ್ಟ್ಗೆ ಇದ್ದ ಊಹಾಪೋಹಗಳಿಗೂ ತೆರೆ ಬಿದ್ದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಿವಸೇನೆ ನಾಯಕ ಏಕನಾಥ್ ಶಿಂಧೆ ಹಾಗೂ ಎನ್‌ಸಿಪಿಯ ಅಜಿತ್ ಪವಾರ್ ನೂತನ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಬಿಜೆಪಿ ಹಾಗೂ ಎನ್ಡಿಎ ಮಿತ್ರಕೂಟದ ರಾಜ್ಯಗಳ ಸಿಎಂಗಳು ಇಂದಿನ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಶಿಂಧೆ, ಪವಾರ್ ಡಿಸಿಎಂಗಳಾಗಿ ಪ್ರಮಾಣ:ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ಅವಿರೋಧವಾಗಿ ಆಯ್ಕೆಯಾದ ಫಡ್ನವಿಸ್ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಯಾರಿಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ದೀರ್ಘಾವಧಿಯ ಸಸ್ಪೆನ್ಸ್ಗೆ ತೆರೆ ಹೇಳಿ, ಫಡ್ನವಿಸ್, ಶಿಂಧೆ ಮತ್ತು ಅಜಿತ್ ಪವಾರ್ ಮಹಾಯುತಿ ಸರ್ಕಾರ ರಚನೆಗೆ ನಿನ್ನೆ ಹಕ್ಕು ಮಂಡಿಸಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ, ಮಹಾಯುತಿಯ ಮೂವರು ನಾಯಕರು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಅನುಮತಿ ಪಡೆದುಕೊಂಡಿದ್ದರು.