ನವದೆಹಲಿ:ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಟೇಕ್ ಗ್ರೂಪ್ಗೆ ಸೇರಿದ 35 ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದಾಳಿ ಮಾಡಿದೆ. ದೆಹಲಿ, ಗುರುಗ್ರಾಮ್, ನೋಯ್ಡಾ, ಮಹಾರಾಷ್ಟ್ರದ ಮುಂಬೈ, ನಾಗ್ಪುರ್ನಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿದೆ.
ಅಮ್ಟೇಕ್ ಗ್ರೂಪ್ ವಿರುದ್ಧ 20,000 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಆರೋಪವಿದೆ. ಅರವಿಂದ್ ಧಾಮ್, ಗೌತಮ್ ಮಲ್ಹೋತ್ರಾ ಹಾಗೂ ಇತರರ ಒಡೆತನದ ಅಮ್ಟೇಕ್ ಗ್ರೂಪ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಗುರುಗ್ರಾಮ್ ವಲಯದ ಕಚೇರಿ ಅಧಿಕಾರಿಗಳು ಇಂದು ಏಕಕಾಲಕ್ಕೆ ಅನೇಕ ಕಡೆಗಳಲ್ಲಿ ಕಾರ್ಯಾಚರಣೆ ಕೈಕೊಂಡಿದ್ದಾರೆ. ಅಮ್ಟೇಕ್ ಗ್ರೂಪ್ ಹಾಗೂ ಅದರ ನಿರ್ದೇಶಕರಿಗೆ ಸೇರಿದ ವ್ಯವಹಾರ ಹಾಗೂ ವಸತಿ ಪ್ರದೇಶಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.