ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯಲಿರುವ ಮಹಾಕುಂಭಮೇಳದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಪ್ರಯಾಗ್ ರಾಜ್ ನ ಸಂಗಮ್ ಪ್ರದೇಶದಲ್ಲಿ ದಿನದ 24 ಗಂಟೆಯೂ ಕಣ್ಗಾವಲು ನೀಡಬಲ್ಲ, 100 ಮೀಟರ್ ವರೆಗೆ ನೀರಿನೊಳಗೆ ಇಳಿಯಬಲ್ಲ 'ಅಂಡರ್ ವಾಟರ್ ಡ್ರೋನ್'ಗಳನ್ನು ನಿಯೋಜಿಸಲಾಗುವುದು ಎಂದು ಸಂಸ್ಕೃತಿ ಸಚಿವಾಲಯ ರವಿವಾರ ತಿಳಿಸಿದೆ.
ಇದಲ್ಲದೆ, ಯಾತ್ರಾರ್ಥಿಗಳು ಮತ್ತು ಇತರ ಸಂದರ್ಶಕರಿಗೆ ಅನುಕೂಲವಾಗುವಂತೆ ಭಾರತದ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ 800 ಬಹುಭಾಷಾ ಬೋರ್ಡ್ಗಳನ್ನು ಅಳವಡಿಸಲಾಗುತ್ತಿದ್ದು, 92 ರಸ್ತೆಗಳನ್ನು ನವೀಕರಣ ಮಾಡಲಾಗುತ್ತಿದೆ. ಅಲ್ಲದೆ 30 ಸಣ್ಣ ಸೇತುವೆಗಳನ್ನು ಕೂಡ ನಿರ್ಮಿಸಲಾಗುತ್ತಿದೆ.
ಕೃತಕ ಬುದ್ಧಿಮತ್ತೆ (ಎಐ) ಸಾಮರ್ಥ್ಯದ 2,700 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇವು ನೈಜ-ಸಮಯದ ಮೇಲ್ವಿಚಾರಣೆಗೆ ಸಹಾಯಕವಾಗಲಿವೆ ಮತ್ತು ಹೆಚ್ಚಿನ ಸುರಕ್ಷತೆಗಾಗಿ ಪ್ರವೇಶ ಸ್ಥಳಗಳಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಲಾಗುವುದು. 56 ಸೈಬರ್ ತಜ್ಞರ ತಂಡವು ಆನ್ ಲೈನ್ ಬೆದರಿಕೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಉತ್ತರ ಪ್ರದೇಶ ಸರ್ಕಾರವು "ಪ್ರಯಾಗ್ ರಾಜ್ನಲ್ಲಿ ನಡೆಯಲಿರುವ 2025 ಮಹಾಕುಂಭವು ಭವ್ಯ, ಸುರಕ್ಷಿತ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧ ಕಾರ್ಯಕ್ರಮವನ್ನಾಗಿಸಲು ವ್ಯಾಪಕ ಸಿದ್ಧತೆಗಳನ್ನು ಮಾಡುತ್ತಿದೆ" ಎಂದು ಸಚಿವಾಲಯ ತಿಳಿಸಿದೆ.
ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ವಿಶ್ವದೆಲ್ಲೆಡೆಯಿಂದ 40 ಕೋಟಿಗೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ.
ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ತಕ್ಷಣ ವಿಪತ್ತು ಪರಿಹಾರ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅತ್ಯಾಧುನಿಕ ಬಹು-ವಿಪತ್ತು ಪ್ರತಿಕ್ರಿಯೆ ವಾಹನವು ಸುರಕ್ಷತೆ ಮತ್ತು ವಿಪತ್ತು ಸನ್ನದ್ಧತೆಯನ್ನು ಹೆಚ್ಚಿಸಲಿದೆ. ಇದು ನೈಸರ್ಗಿಕ ವಿಪತ್ತುಗಳಿಂದ ರಸ್ತೆ ಅಪಘಾತಗಳವರೆಗಿನ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವಾಲಯ ಹೇಳಿದೆ.
ಇದರಲ್ಲಿ 10-20 ಟನ್ ಸಾಮರ್ಥ್ಯದ ಲಿಫ್ಟಿಂಗ್ ಬ್ಯಾಗ್ ಕೂಡ ಸೇರಿದೆ. ಅವಶೇಷಗಳ ಅಡಿಯಲ್ಲಿ ಹೂತುಹೋದ ವ್ಯಕ್ತಿಗಳನ್ನು ರಕ್ಷಿಸಲು ಮತ್ತು 1.5 ಟನ್ ತೂಕದ ಭಾರವಾದ ವಸ್ತುಗಳನ್ನು ಎತ್ತಲು ಮತ್ತು ಸಾಗಿಸಲು ಈ ವಿಶೇಷ ಯಂತ್ರಗಳು ಅನುವು ಮಾಡಿಕೊಡುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
35 ಮೀಟರ್ ಎತ್ತರ ಮತ್ತು 30 ಮೀಟರ್ ಅಗಲ ಪ್ರದೇಶದಲ್ಲಿನ ಬೆಂಕಿಯನ್ನು ನಿಭಾಯಿಸುವ ಸಾಮರ್ಥ್ಯವಿರುವ ನಾಲ್ಕು ಆರ್ಟಿಕ್ಯುಲೇಟಿಂಗ್ ವಾಟರ್ ಟವರ್ ಗಳನ್ನು (ಎಡಬ್ಲ್ಯುಟಿ) ನಿಯೋಜಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಅಗ್ನಿ ಸುರಕ್ಷತಾ ಕ್ರಮಗಳಿಗಾಗಿ 131 ಕೋಟಿ ರೂ. ಮೀಸಲಿಡಲಾಗಿದೆ. ಅಗ್ನಿ ಅವಘಡಗಳನ್ನು ತಡೆಗಟ್ಟಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಎಡಬ್ಲ್ಯುಟಿಗಳು ವಿಡಿಯೋ ಮತ್ತು ಥರ್ಮಲ್ ಇಮೇಜಿಂಗ್ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿವೆ ಎಂದು ಅದು ಹೇಳಿದೆ.
ಇದನ್ನೂ ಓದಿ : 'ಸಂವಿಧಾನ ಓದು' ಅಭಿಯಾನಕ್ಕೆ ಪಿಎಂ ಮೋದಿ ಚಾಲನೆ: ನೂತನ ವೆಬ್ಸೈಟ್ ಅನಾವರಣ - MANN KI BAAT