ನವದೆಹಲಿ:ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಐದನೇ ಸಮನ್ಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್‌ಗೆ ಈವರೆಗೆ 4 ಬಾರಿ ಸಮನ್ಸ್ ನೀಡಿದ್ದರೂ, ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ಹೊಸದಾಗಿ ಮತ್ತೊಮ್ಮೆ ಬುಲಾವ್ ನೀಡಲಾಗಿದೆ.
ಫೆಬ್ರವರಿ 2 ರಂದು ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿ ಎಂದು ಸಮನ್ಸ್ನಲ್ಲಿ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಇದಕ್ಕೂ ಮೊದಲು ದೆಹಲಿ ಸಿಎಂಗೆ 2023 ರ ಜನವರಿ 18, ಜನವರಿ 3, ನವೆಂಬರ್ 2, ಡಿಸೆಂಬರ್ 21 ರಂದು ತನಿಖಾ ಸಂಸ್ಥೆಯಿಂದ ನಾಲ್ಕು ಸಮನ್ಸ್‌ಗಳನ್ನು ನೀಡಲಾಗಿದೆ. ಈ ಎಲ್ಲಾ ನೋಟಿಸ್‌ಗಳು ಕಾನೂನುಬಾಹಿರ ಎಂದು ಅರವಿಂದ್ ಕೇಜ್ರಿವಾಲ್ ಅಲ್ಲಗಳೆದಿದ್ದರು.
ಸಮನ್ಸ್ಗೆ ವಿರೋಧವೇಕೆ?:ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿ ಲೋಕಸಭೆ ಚುನಾವಣೆಯಿಂದ ದೂರ ಇಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಹೀಗಾಗಿ ಇಡಿಯನ್ನು ತಮ್ಮ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಅರವಿಂದ್ ಕೇಜ್ರಿವಾಲ್ ನೀಡಿದ ಎಲ್ಲ ಸಮನ್ಸ್‌ಗಳನ್ನು ನಿರ್ಲಕ್ಷಿಸಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರಕರಣದಲ್ಲಿ ಈಗಾಗಲೇ ಆಪ್ನ ಸಚಿವರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿದೆ ಎಂದು ಇಡಿ ಬಲವಾಗಿ ಆರೋಪಿಸಿದೆ.