ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನವೇ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಗಡುವಿನ ಒಂದು ದಿನದ ಮುಂಚಿತವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೀಡಿದ ಚುನಾವಣಾ ಬಾಂಡ್‌ಗಳ ವಿವರವನ್ನು ಆಯೋಗ ಸಾರ್ವಜನಿಕಗೊಳಿಸಿದೆ.
ಚುನಾವಣಾ ಬಾಂಡ್‌ಗಳ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಎಸ್ಬಿಐ, ಮಾರ್ಚ್ 12ರಂದು ಚುನಾವಣಾ ಆಯೋಗದೊಂದಿಗೆ ತನ್ನ ಮಾಹಿತಿಯನ್ನು ಹಂಚಿಕೊಂಡಿತ್ತು. ಇದಾದ ನಂತರ ವೆಬ್‌ಸೈಟ್‌ನಲ್ಲಿ ಡೇಟಾ ಅಪ್‌ಲೋಡ್ ಮಾಡಲು ಮಾರ್ಚ್ 15ರ ಸಂಜೆ 5 ಗಂಟೆಯವರೆಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸಮಯ ನೀಡಿತ್ತು.
ಇದೀಗ 327 ಪುಟಗಳ ದಾನಿಗಳ ಪಟ್ಟಿ ಮತ್ತು 427 ಪುಟಗಳ ಪಕ್ಷಗಳ ಪಟ್ಟಿಯ ಎರಡು ಡೇಟಾ ಸೆಟ್‌ಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲಾಗಿದೆ. 2019ರ ಏಪ್ರಿಲ್ 12 ರಿಂದ 1 ಲಕ್ಷ ಮತ್ತು 1 ಕೋಟಿ ಮೌಲ್ಯದ ಮುಖಬೆಲೆಯ ಬಾಂಡ್‌ಗಳ ಖರೀದಿ, ಅವುಗಳನ್ನು ಖರೀದಿಸಿದ ಕಂಪನಿಗಳು ಮತ್ತು ವ್ಯಕ್ತಿಗಳು ಮತ್ತು ಹಣವನ್ನು ಪಡೆದ ರಾಜಕೀಯ ಪಕ್ಷಗಳ ಮಾಹಿತಿಯನ್ನು ಬಯಲು ಮಾಡಲಾಗಿದೆ.