ನವದೆಹಲಿ: ಎಎಪಿ ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ದೆಹಲಿಯಲ್ಲಿನ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 25,000 ರೂ.ಗಳಷ್ಟು ಉಳಿತಾಯವಾಗುತ್ತಿದೆ ಮತ್ತು ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಹೊಸ ಯೋಜನೆಗಳಿಂದಾಗಿ ಜನರಿಗೆ ಮಾಸಿಕ ಇನ್ನೂ 10 ಸಾವಿರ ರೂಪಾಯಿ ಲಾಭವಾಗಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ತಮ್ಮ ಪಕ್ಷದ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಆರ್ಥಿಕ ಪ್ರಯೋಜನಗಳನ್ನು ತೋರಿಸುವ ಉದ್ದೇಶದಿಂದ ಎಎಪಿಯ 'ಬಚತ್ ಪತ್ರ' ಅಭಿಯಾನಕ್ಕೆ ಚಾಲನೆ ನೀಡಿ ಮಾಜಿ ಮುಖ್ಯಮಂತ್ರಿ ಮಾತನಾಡಿದರು.
"ನಮ್ಮ ಸ್ವಯಂಸೇವಕರು ಜನರ ಬಳಿಗೆ ಹೋಗುತ್ತಾರೆ ಮತ್ತು 'ಬಚತ್ ಪತ್ರ' ವನ್ನು ಭರ್ತಿ ಮಾಡುವಂತೆ ಮಾಡುತ್ತಾರೆ. ಈ ಮೂಲಕ ನಮ್ಮ ಸರ್ಕಾರದ ಉಚಿತ ಕಲ್ಯಾಣ ಉಪಕ್ರಮಗಳ ಮೂಲಕ ಎಷ್ಟು ಉಳಿತಾಯವಾಗುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲಾಗುತ್ತದೆ" ಎಂದು ಕೇಜ್ರಿವಾಲ್ ಹೇಳಿದರು.
"ಎಎಪಿ ಸರ್ಕಾರದ ನೀತಿಗಳ ಅಡಿ ಸರಾಸರಿ ದೆಹಲಿ ಕುಟುಂಬವು ತಿಂಗಳಿಗೆ 25,000 ರೂ.ಗಳನ್ನು ಉಳಿಸುತ್ತದೆ ಮತ್ತು ಜನರು 'ಝಾಡು' (ಪೊರಕೆ - ಎಎಪಿಯ ಚುನಾವಣಾ ಚಿಹ್ನೆ) ಪಕ್ಕದ ಗುಂಡಿ ಒತ್ತುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ, ಹೊಸ ಯೋಜನೆಗಳ ಮೂಲಕ ಇನ್ನೂ 10,000 ರೂ.ಗಳಷ್ಟು ಕೊಡುಗೆಗಳನ್ನು ನೀಡಲಾಗುತ್ತದೆ. ಎಎಪಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿಯಂಥ ಯೋಜನೆಗಳು ಈ ಉಪಕ್ರಮಗಳಲ್ಲಿ ಸೇರಿವೆ" ಎಂದು ಅವರು ಹೇಳಿದರು.