ಕರೀಂನಗರ, ತೆಲಂಗಾಣ: ರಾಜ್ಯದ ಕರೀಂನಗರದಲ್ಲಿವ ಈ ಬಾವಿ ದೂಧ್ ಬಾವಿ ಎಂದೇ ಪ್ರಸಿದ್ಧ. ಕಾಕತೀಯ ರಾಜ ಪ್ರತಾಪರು ಮೊಳಂಗೂರು ಕೋಟೆಯನ್ನು ನಿರ್ಮಿಸುವಾಗ ಕೋಟೆಯ ಪ್ರವೇಶದ್ವಾರದ ಮುಂಭಾಗದಲ್ಲಿ ಸಂಪೂರ್ಣ ಕಲ್ಲಿನ ಗೋಡೆಯಿಂದ ಈ ಬಾವಿಯನ್ನು ಕಟ್ಟುತ್ತಾರೆ. ಇಂದಿಗೂ ಈ ಬಾವಿಯಲ್ಲಿ ಹಾಲಿನಂತೆ ಶುದ್ಧ ಬಿಳಿ ಬಣ್ಣದಲ್ಲಿ ನೀರು ತುಂಬಿ ತುಳುಕುತ್ತಿದೆ. ಈಗಲೂ ಜನರಿಗೆ ಮತ್ತು ಇತಿಹಾಸಕಾರರಿಗೆ ಬಾವಿಯಲ್ಲಿನ ನೀರು ಏಕೆ ಕ್ಷೀರದಂತೆ ಬಿಳಿಯಾಗಿರುತ್ತದೆ ಎಂದು ಆಶ್ಚರ್ಯ ಪಡುತ್ತಾರೆ. ಅಷ್ಟು ಅಚ್ಚರಿಯನ್ನು ಒಳಗೊಂಡ ಈ ಮೊಳಂಗೂರು ಗ್ರಾಮದ ದೂದ್ಬಾವಿಯ ನೀರಿನ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆಯೇ.
ತಳದಿಂದ ಮೇಲಿನವರೆಗೆ ಬಾವಿಯನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಬಾವಿ ನೀರೊಳಗೆ ನೀವು ನಾಣ್ಯ ಹಾಕಿದರೆ ಮೇಲಿನಿಂದ ಸ್ಪಷ್ಟವಾಗಿ ನಾಣ್ಯ ಕಾಣುತ್ತದೆ. ಇದು ನೀರಿನ ಪಾರದರ್ಶಕತೆಗೆ ಸಾಕ್ಷಿಯಾಗಿದೆ. ನೋಡಲು ಹಾಲಿನಂತೆ ಗೋಚರಿಸುವ 'ದೂದ್ಬಾವಿ ನೀರು ಕುಡಿದರೆ ಯಾವುದೇ ಕಾಯಿಲೆ ಬರುವುದಿಲ್ಲ' ಎಂಬುದು ಸುತ್ತಮುತ್ತಲಿನ ಗ್ರಾಮಗಳ ಜನರ ನಂಬಿಕೆ. ಹೀಗಾಗಿ ಈ ಬಾವಿಯನ್ನು ನೋಡಲೆಂದೇ ಅನೇಕ ಕಡೆಯಿಂದ ಜನ ಬರುತ್ತಾರೆ. ಇನ್ನು ಇತಿಹಾಸದಲ್ಲಿ ' ನವಾಬನು ತನ್ನ ಅಗತ್ಯಗಳಿಗಾಗಿ ಇದೇ ಬಾವಿಯ ನೀರನ್ನು ಕುದುರೆಗಳ ಮೂಲಕ ಕೊಂಡೊಯ್ಯುತ್ತಿದ್ದನು' ಎಂದು ಸ್ಥಳೀಯರು ಹೇಳುತ್ತಾರೆ.
ಭವ್ಯ ಇತಿಹಾಸ ಹೊಂದಿರುವ ಈ ದೂದ್ಬಾವಿ ನೀರಿನ ಗುಣಮಟ್ಟವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳೊಂದಿಗೆ ಅಧಿಕಾರಿಗಳು ಪರೀಕ್ಷಿಸಿದ್ದಾರೆ. ಮಾರುಕಟ್ಟೆಯಲ್ಲಿ ಕಂಪನಿಗಳು ಬಾಟಲಿ, ಪ್ಯಾಕೆಟ್ಗಳ ರೂಪದಲ್ಲಿ ಸಿಗುವ ನೀರಿಗಿಂತ ನೈಸರ್ಗಿಕವಾಗಿ ದೊರಕುವ ಬಾವಿ ನೀರೇ ಮೇಲು ಎಂಬುದು ಇತ್ತೀಚೆಗೆ ಭೂಗತ ಜಲ ಇಲಾಖೆಯ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಸ್ಪಷ್ಟವಾಗಿದೆ.