ವಾರಣಾಸಿ: 8 ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನುಂಗಿದ್ದ 25 ಪೈಸೆಯ ನಾಣ್ಯವನ್ನು ಹೊರತೆಗೆಯುವಲ್ಲಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಶಸ್ತ್ರಚಿಕಿತ್ಸೆ ಮೂಲಕ ಕಳೆದ 8 ವರ್ಷಗಳಿಂದ ಹೊಟ್ಟೆಯಲ್ಲಿದ್ದ ನಾಣ್ಯವನ್ನು ಹೊರತೆದ ವೈದ್ಯರ ತಂಡಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೋಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಹೊಟ್ಟೆ ಸೇರಿಕೊಂಡಿದ್ದ ನಾಣ್ಯ (Photo Credit: BHU) ಅಪರೂಪದ ಶಸ್ತ್ರಚಿಕಿತ್ಸೆಯನ್ನು ಕೇವಲ 20 ನಿಮಿಷಗಳಲ್ಲಿ ನಡೆಸಿರುವುದು ಗಮನಾರ್ಹ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗೆ 40 ವರ್ಷ ವಯಸ್ಸಾಗಿದ್ದು, 32 ವರ್ಷದವರಾಗಿದ್ದಾಗ ನಾಣ್ಯ ನುಂಗಿದ್ದರು. ಬಾಯಲ್ಲಿಟ್ಟುಕೊಂಡು ಮಲಗಿದ್ದಾಗ ಆಕಸ್ಮಿಕವಾಗಿ ಬಾಯಿಯಿಂದ ಜಾರಿ ಶ್ವಾಸನಾಳದಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಕೊನೆಗೆ ವಿಧಿಯಿಲ್ಲದೇ ಆಸ್ಪತ್ರೆಗೆ ಬಂದಿದ್ದರು.
ಆಸ್ಪತ್ರೆಯ ಕಾರ್ಡಿಯೋ ಥೋರಾಸಿಕ್ ಸರ್ಜನ್ ಪ್ರೊ.ಸಿದ್ಧಾರ್ಥ್ ಲಖೋಟಿಯಾ ಮತ್ತು ಪ್ರೊ.ಎಸ್.ಕೆ.ಮಾಥುರ್ ನೇತೃತ್ವದ ತಂಡ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ನಾಣ್ಯ ಹೊರತೆಗೆದಿದೆ.
ರೋಗಿಯು ಭಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸಲಿಲ್ಲ. ಆದರೆ, ನಾಣ್ಯ ಶ್ವಾಸನಾಳದಲ್ಲಿ ಸಿಲುಕಿದ್ದರಿಂದ ಉಸಿರುಗಟ್ಟಿಸುವ ಸಾಧ್ಯತೆ ಹೆಚ್ಚಿತ್ತು. ಶ್ವಾಸಕೋಶಗಳಿಗೂ ಸಮಸ್ಯೆ ಇತ್ತು. ಈಗ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ ಹೊಟ್ಟೆಯಲ್ಲಿದ್ದ ನಾಣ್ಯವನ್ನು ತೆಗೆದಿದ್ದೇವೆ. ರೋಗಿ ಕೂಡ ಆರೋಗ್ಯವಾಗಿದ್ದಾರೆ ಎನ್ನುತ್ತಾರೆ ಪ್ರೊಫೆಸರ್ ಸಿದ್ಧಾರ್ಥ್.
ಹೊಟ್ಟೆ ಸೇರಿಕೊಂಡಿದ್ದ ನಾಣ್ಯ ಹೊರತೆಗೆದ ವೈದ್ಯರು (Photo Credit: BHU) ನಮ್ಮ ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಪ್ರಾಣವೇ ಹೋಗಬಹುದು. ಜೀವಕ್ಕೆ ಅಪಾಯ ತಂದಿಡಬಹುದು. ಇದು ಅಂತಹದ್ದೇ ಪ್ರಕರಣ. ಈ ವ್ಯಕ್ತಿಯ ಹೊಟ್ಟೆಯಲ್ಲಿದ್ದ ನಾಣ್ಯವನ್ನು ಹೊರತೆಗೆಯಲು ಅಡ್ವಾನ್ಸ್ಡ್ ರಿಂಗಿಂಗ್ ಬ್ರೋಕಾ ಸ್ಕೋಪ್‌ನಂತಹ ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಲಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ರೋಗಿ ಕೂಡ ಆರೋಗ್ಯವಾಗಿದ್ದಾರೆ ಎನ್ನುತ್ತಾರೆ ಅರಿವಳಿಕೆ ವಿಭಾಗದ ವೈದ್ಯೆ ಅಮೃತಾ.
ವ್ಯಕ್ತಿಯು ಬಾಯಿಯಲ್ಲಿ ಯಾವುದೇ ವಸ್ತು ಇಟ್ಟುಕೊಂಡು ಮಲಗಿದರೆ ಅದು ನೇರವಾಗಿ ಅವನ ಶ್ವಾಸನಾಳಕ್ಕೆ ತೆರಳುತ್ತದೆ. ಇದರಿಂದ ಉಸಿರಾಟ ತೊಂದರೆ ಸೇರಿ ಹಲವು ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕ. ಹಾಗಾಗಿ ಮಲಗುವ ಮೊದಲು ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ:ಬಿಹಾರ: ಹಿಂದಿಯಲ್ಲೂ ಎಂಬಿಬಿಎಸ್ ಪದವಿ ನೀಡಲು ನಿರ್ಧಾರ - MBBS Course In Hindi