ಜೋಧಪುರ(ರಾಜಸ್ಥಾನ):ಕೆಲವರಿಗೆ ಮಣ್ಣು, ಗಾಜು ತಿನ್ನುವ ಅಭ್ಯಾಸ ಇರುತ್ತದೆ. ಇಲ್ಲೊಬ್ಬ ಮಹಿಳೆಗೂ ಇಂಥದ್ದೇ ಕೆಟ್ಟ ಹವ್ಯಾಸ ಇದ್ದು, ಕೂದಲನ್ನು ತಿಂದಿದ್ದಾಳೆ. ಇದರಿಂದ ಹೊಟ್ಟೆಯಲ್ಲಿ ಮೂರು ಕೆ.ಜಿ ತೂಕದ ಕೇಶ ರಾಶಿ ಸಂಗ್ರಹವಾಗಿದೆ. ಹೊಟ್ಟೆನೋವಿಗೆ ತುತ್ತಾಗಿದ್ದ ಈಕೆಗೆ ಶಸ್ತ್ರಚಿಕಿತ್ಸೆ ನಡೆಸಿ ಕೂದಲನ್ನು ಹೊರತೆಗೆದಿದ್ದಾರೆ.
ರಾಜಸ್ಥಾನದ ಜೋಧ್ಪುರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಮಾಥುರ್ ಆಸ್ಪತ್ರೆಯಲ್ಲಿ ಮಹಿಳೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ ತೂಕದ ಕೂದಲಿನ ಗಂಟನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ ಎಂದು ವೈದ್ಯ ದಿನೇಶ್ ದತ್ ಶರ್ಮಾ ತಿಳಿಸಿದ್ದಾರೆ.
ನಡೆದಿದ್ದೇನು?:ಹೊಟ್ಟೆ ನೋವು, ವಾಂತಿ, ಹಸಿವಿನ ಕೊರತೆ ಮತ್ತು ಹೊಟ್ಟೆ ಭಾರದಿಂದ ಬಳಲುತ್ತಿದ್ದ 28 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆಯನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ತಪಾಸಣೆ ನಡೆಸಿದ್ದಾರೆ. ಹೊಟ್ಟೆಯಲ್ಲಿ ಕೂದಲು ಇರುವುದು ಕಂಡುಬಂದಿದೆ. ಆಪರೇಷನ್ ಮಾಡಲು ಸೂಚಿಸಿದ್ದಾರೆ. ಅಂತಿಮವಾಗಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಕೂದಲನ್ನು ತೆಗೆದಿದ್ದಾರೆ.
ಕೂದಲು ತಿನ್ನುವ ಅಭ್ಯಾಸ:ಇದೇ ವೇಳೆ ಕೂದಲು ಹೊಟ್ಟೆ ಸೇರಿದ್ದರ ಬಗ್ಗೆ ವಿಚಾರಣೆ ನಡೆಸಿದಾಗ ಮಹಿಳೆಯು ತನಗೆ ಕೂದಲು ತಿನ್ನುವ ಅಭ್ಯಾಸ ಇದೆ ಎಂದು ಒಪ್ಪಿಕೊಂಡಿದ್ದಾಳೆ. ವಿಶೇಷವೆಂದರೆ, ಆಕೆಯ ತಲೆಯ ಕೂದಲನ್ನೇ ಕತ್ತರಿಸಿ ತಿಂದಿದ್ದಾಳೆ. ಹೀಗಾಗಿ ತಲೆ ಬೋಳಾಗಿದೆ.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಮಹಿಳೆಯ ಮಾನಸಿಕ ಆರೋಗ್ಯ ಉತ್ತಮವಾಗಿದೆ. ಆದರೂ, ಆಕೆ ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಹೀಗೆ ವಿಚಿತ್ರವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಟ್ರೈಕೋಫೇಜಿಯಾ ಎಂಬ ಕಾಯಿಲೆಗೆ ತುತ್ತಾಗಿರುತ್ತಾರೆ. ಆದರೆ, ಈಕೆಯಲ್ಲಿ ಅಂತಹ ಯಾವುದೇ ಅಂಶ ಕಂಡುಬಾರದೇ ಇರುವುದು ವೈದ್ಯರಲ್ಲಿ ಅಚ್ಚರಿ ಮೂಡಿಸಿದೆ.
ಹೊಟ್ಟೆಯಲ್ಲಿ ದೊಡ್ಡ ಪ್ರಮಾಣದ ಕೂದಲು ಸಂಗ್ರಹವಾಗಿದ್ದರಿಂದ ಮಹಿಳೆಗೆ ಹಸಿವು ಇಂಗಿ ಹೋಗಿತ್ತು. ಏನನ್ನಾದರೂ ತಿಂದರೆ ವಾಂತಿಯಾಗುತ್ತಿತ್ತು. ಇದರಿಂದ ಸಹಜವಾಗಿ ಆಕೆ ತೂಕವು ತಗ್ಗಿತ್ತು. ಆದಾಗ್ಯೂ, ಆಕೆಯ ಮಾನಸಿಕ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹೀಗಿರುವಾಗ ಆಕೆ ಕೂದಲು ತಿಂದಿದ್ದು ಯಾಕೆ ಎಂಬ ಪ್ರಶ್ನೆ ವೈದ್ಯರನ್ನು ಕಾಡಿದೆ.
ಏನಿದು ಟ್ರೈಕೋಫೇಜಿಯಾ ಕಾಯಿಲೆ?:ಟ್ರೈಕೋಫೇಜಿಯಾ ಎಂಬ ಕಾಯಿಲೆಯು ವಿಚಿತ್ರವಾಗಿದ್ದು, ಇದರಿಂದ ಬಳಲುವ ವ್ಯಕ್ತಿಗಳು ಕೂದಲನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ದೇಹದಲ್ಲಿನ ಜೀರ್ಣಾಂಗ ವ್ಯವಸ್ಥೆಯನ್ನೇ ತಡೆಯುತ್ತದೆ. ಕೂದಲಿನ ಸಂಗ್ರಹದಿಂದ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ನಶಿಸುತ್ತದೆ. ಇದರಿಂದ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇರುತ್ತದೆ. ಈ ರೋಗವು ಸಾಮಾನ್ಯವಾಗಿ 15 ರಿಂದ 25 ವರ್ಷಗಳ ನಡುವಿನ ಮಾನಸಿಕ ದೌರ್ಬಲ್ಯ, ವಿಕೃತ ಮತ್ತು ಅಸಹಜವಾಗಿ ವರ್ತಿಸುವ ವ್ಯಕ್ತಿಗಳಲ್ಲಿ ಕಂಡುಬರುತ್ತದೆ ಎಂದು ಡಾ.ದಿನೇಶ್ ದತ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ:ಒಂದೇ ದಿನದ ಅಂತರದಲ್ಲಿ ಸೇನಾ ದಂಪತಿ ಆತ್ಮಹತ್ಯೆ: ಒಟ್ಟಿಗೆ ಅಂತ್ಯಸಂಸ್ಕಾರ ಮಾಡುವಂತೆ 'ಡೆತ್ನೋಟ್'