ತಿರುವನಂತಪುರಂ (ಕೇರಳ): ಸಾಮಾಜಿಕ ಮಾಧ್ಯಮಗಳಿಂದ ಸರ್ಕಾರಿ ವೈದ್ಯರು ಮತ್ತು ಆರೋಗ್ಯ ಇಲಾಖೆ ನೌಕರರನ್ನು ದೂರ ಇರಿಸುವ ವಿವಾದಾತ್ಮಕ ಸುತ್ತೋಲೆಯನ್ನು ಕೇರಳ ಸರ್ಕಾರವು ಹಿಂಪಡೆಯಲು ನಿರ್ಧರಿಸಿದೆ. ವೈದ್ಯಾಧಿಕಾರಿಗಳ ಸಂಘ ಮತ್ತು ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ತೀವ್ರ ಪ್ರತಿರೋಧದ ನಂತರ ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಮಾರ್ಚ್ 13ರಂದು ಕೇರಳದ ಆರೋಗ್ಯ ಸೇವೆಗಳ ನಿರ್ದೇಶನಾಲಯವು ವೈದ್ಯರು ಸೇರಿದಂತೆ ಆರೋಗ್ಯ ನೌಕರರು ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಪೋಸ್ಟ್ ಮಾಡುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು. ಅಷ್ಷೇ ಅಲ್ಲ, ಯುಟ್ಯೂಬ್ ಚಾನೆಲ್‌ಗಳು ಮತ್ತು ವಿಡಿಯೋ ಬ್ಲಾಗ್‌ಗಳನ್ನು ನಿರ್ವಹಿಸುವುದನ್ನು ಸಹ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದೀಗ ಆಡಳಿತಾತ್ಮಕ ಕಾರಣಗಳನ್ನು ನೀಡಿ ಆರೋಗ್ಯ ಸೇವೆಗಳ ನಿರ್ದೇಶನಾಲಯ ಈ ವಿವಾದಿತ ಸುತ್ತೋಲೆಯನ್ನು ಹಿಂಪಡೆದಿದೆ.
ಏನಿದು ವಿವಾದಿತ ಸುತ್ತೋಲೆ?: ಸರ್ಕಾರಿ ವೈದ್ಯರ ಸಾಮಾಜಿಕ ಮಾಧ್ಯಮಗಳ ಬಳಕೆಯು ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಬಹುದು. ಸರ್ಕಾರಿ ನೌಕರರ ಅಧಿಕೃತ ಕರ್ತವ್ಯಗಳ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಿ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿತ್ತು. ಸಾರ್ವಜನಿಕ ಸೇವಕರ ನೀತಿ ಸಂಹಿತೆ ಪ್ರಕಾರ, ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ನಿರ್ವಹಿಸಲು ಬಯಸುವ ಎಲ್ಲ ಸರ್ಕಾರಿ ನೌಕರರು, ಅದರ ಅನುಮೋದನೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ತಮ್ಮ ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಕೆಲವು ಉದ್ಯೋಗಿಗಳು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.