ನವದೆಹಲಿ: ದೇಶದಲ್ಲಿಲೋಕಸಭಾ ಚುನಾವಣೆ 2024 ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಕರಪತ್ರಗಳ ವಿತರಣೆ, ಪಕ್ಷದ ಪರ ಘೋಷಣೆ ಕೂಗುವುದು ಸೇರಿದಂತೆ ಯಾವುದೇ ರೂಪದ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಕೇಂದ್ರ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ತಿಳಿಸಿದೆ.
ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಮಕ್ಕಳನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಳ್ಳುವುದು, ಪ್ರಚಾರಕ್ಕಾಗಿ ವಾಹನಗಳಲ್ಲಿ ಕರೆದುಕೊಂಡು ಹೋಗುವುದು ಹಾಗೂ ರ‍್ಯಾಲಿಗಳಲ್ಲಿ ಮಕ್ಕಳನ್ನು ಬಳಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಆಯೋಗ ಕಟ್ಟುನಿಟ್ಟಾಗಿ ತಿಳಿಸಿದೆ. ಕವಿತೆ, ಹಾಡುಗಳು, ಮಾತನಾಡುವ ಪದಗಳು, ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಚಿಹ್ನೆಗಳ ಪ್ರದರ್ಶನ ಸೇರಿದಂತೆ ಯಾವುದೇ ರೀತಿಯ ರಾಜಕೀಯ ಪ್ರಚಾರಕ್ಕೂ ಮಕ್ಕಳನ್ನು ಬಳಸುವಂತಿಲ್ಲ ಎಂದಿದೆ.