ಮುಂಬೈ(ಮಹಾರಾಷ್ಟ್ರ):ದೇಶದದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಜನರು ಬಿಜೆಪಿಗೆ ಕೈಕೊಟ್ಟಿದ್ದಾರೆ. ಇದು ಕಮಲ ಪಕ್ಷಕ್ಕೆ ಏಕಮೇವವಾಗಿ ಬಹುಮತ ಪಡೆಯಲು ಹಿನ್ನಡೆ ಉಂಟು ಮಾಡಿದೆ. ಇದು ಆಯಾ ರಾಜ್ಯದ ನಾಯಕರ ಸಾಮರ್ಥ್ಯದ ಮೇಲೂ ಪ್ರಶ್ನೆ ಮೂಡಿಸಿದೆ.
ಅದರಲ್ಲೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ಇದರಿಂದ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಪಕ್ಷ ಹೆಚ್ಚಿನ ಸೀಟು ಗಳಿಸುವಲ್ಲಿ ವಿಫಲವಾದ ಕಾರಣ, ತಾವು ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.
ಸರ್ಕಾರದಿಂದ ಹೊರಕ್ಕೆ:ಮುಂಬೈ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದ್ದರ ಪೂರ್ಣ ಹೊಣೆಯನ್ನು ನಾನೇ ಹೊರುವೆ. ಇದರಿಂದಾಗಿ ಪಕ್ಷ ಬಲವರ್ಧಿಸಲು ನಾನು ಸರ್ಕಾರದಿಂದ ಹೊರಗಿರುವೆ. ಡಿಸಿಎಂ ಸ್ಥಾನದಿಂದ ತಮ್ಮನ್ನು ಕೈಬಿಡುವಂತೆ ಹೈಕಮಾಂಡ್ಗೆ ಮನವಿ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಕೆಲವೆಡೆ ಭಾರೀ ಹಿನ್ನಡೆಯಾಗಿದೆ. ಈ ತಪ್ಪಿನ ಪೂರ್ಣ ಹೊಣೆಗಾರ ನಾನೇ. ಹೀಗಾಗಿ ಸರ್ಕಾರದ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರನ್ನು ಕೋರುತ್ತೇನೆ. ಅವರನ್ನು ಶೀಘ್ರವೇ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ಅವರು ಹೇಳಿದರು.