ನವದೆಹಲಿ:ದೆಹಲಿ ಚುನಾವಣಾ ಕಣದಲ್ಲಿ ಕಾಂಗ್ರೆಸ್ ತನ್ನ ನಾಲ್ಕನೇ ಭರವಸೆಯನ್ನು ಗುರುವಾರ ಘೋಷಿಸಿದೆ. ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್, ಉಚಿತ ಪಡಿತರ ಮತ್ತು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಈ ಘೋಷಣೆ ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನೀಡಿದ ಎಲ್ಲ ಭರವಸೆಗಳನ್ನು ದೆಹಲಿಯಲ್ಲಿ ಜಾರಿ ಮಾಡಲಾಗುವುದು. ಸತತ 3 ಬಾರಿ ಆಡಳಿತ ನಡೆಸಿದರೂ, ರಾಷ್ಟ್ರ ರಾಜಧಾನಿಯ ಜನರ ಜೀವನವನ್ನು ಸುಧಾರಿಸಲು ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರಗಳು ವಿಫಲವಾಗಿದೆ ಎಂದು ಟೀಕಿಸಿದರು.
"ಮೋದಿ ಮತ್ತು ಕೇಜ್ರಿವಾಲ್ ಅವರ ನಡುವೆ ಹೆಸರಿನ ವ್ಯತ್ಯಾಸ ಬಿಟ್ಟರೆ ಏನೂ ಇಲ್ಲ. ಇಬ್ಬರೂ ಸುಳ್ಳು ಹೇಳುತ್ತಾರೆ. ಕೇಜ್ರಿವಾಲ್ ಮೂರು ಬಾರಿ ಸಿಎಂ ಆಗಿದ್ದಾರೆ. ಮೋದಿ ಕೂಡ ಮೂರು ಬಾರಿ ಪ್ರಧಾನಿಯಾಗಿದ್ದಾರೆ. ಆದರೆ ದೆಹಲಿ ಅಭಿವೃದ್ಧಿಯಲ್ಲಿ ಅವರ ಸಾಧನೆ ಶೂನ್ಯವಾಗಿದೆ. ದೆಹಲಿಯು ವಾಸಿಸಲು ಸೂಕ್ತವಲ್ಲದ ಸ್ಥಿತಿ ಇದೆ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಅನ್ನು ಗೆಲ್ಲಿಸುವ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕು ಎಂದು ಮನವಿ ಮಾಡಿದರು.
ಇತರ ಭರವಸೆಗಳು:ಕಾಂಗ್ರೆಸ್ ತನ್ನ ಮೊದಲ ಭರವಸೆಯಾದ ಪ್ಯಾರಿ ದೀದಿ ಯೋಜನೆಯನ್ನು ಜನವರಿ 6 ರಂದು ಪ್ರಕಟಿಸಿತು. ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೂಲಕ ಅನಾವರಣವಾದ ಈ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಸಿಗಲಿದೆ.