ನವದೆಹಲಿ: ಅಮಾನತುಗೊಂಡಿರುವ ಐಎಎಸ್ ಪ್ರೊಬೇಷನರ್ ಅಧಿಕಾರಿ ಪೂಜಾ ಖೇಡ್ಕರ್ ತಮ್ಮನ್ನು ಬಂಧಿಸದಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ದೆಹಲಿ ಹೈಕೋರ್ಟ್ ಅಕ್ಟೋಬರ್ 4ಕ್ಕೆ ಮುಂದೂಡಿದೆ. ಅಲ್ಲಿವರೆಗೂ ಅವರು ಬಂಧನದಿಂದ ರಿಲೀಫ್ ಸಿಕ್ಕಿದೆ.
ಖೇಡ್ಕರ್ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿರುವ ಮನವಿಯನ್ನು ಆಲಿಸಿದ ನ್ಯಾ ಚಂದ್ರ ದಾರಿ ಸಿಂಗ್ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದ್ದಾರೆ. ಇನ್ನು ದೆಹಲಿ ಪೊಲೀಸರ ಪರ ವಾದ ಮಾಡಿದ ವಕೀಲರು, ಖೇಡ್ಕರ್ ಫೋರ್ಜರಿ ಮತ್ತು ದಾಖಲಾತಿ ಸೃಷ್ಟಿಯಂತಹ ದೊಡ್ಡ ಪಿತೂರಿಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ ಎಂದು ಪೀಠದ ಗಮನಕ್ಕೆ ತಂದರು. ಅಷ್ಟೇ ಅಲ್ಲ ಜಾಮೀನು ನೀಡದಂತೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ಕೋರಿಕೆಯ ಮೇರೆಗೆ ಅಕ್ಟೋಬರ್ 4ರ ವರೆಗೂ ಬಂಧಿಸಿದಂತೆ ಸೂಚಿಸಿದ ನ್ಯಾಯಮೂರ್ತಿಗಳು ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ಮುಂದೂಡಿದರು. ದೇಶದ ಅತ್ಯುನ್ನತ ಪರೀಕ್ಷೆಯಾದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೀಸಲಾತಿ ಪ್ರಯೋಜನ ಪಡೆಯಲು ಪೂಜಾ ಖೇಡ್ಕರ್ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದರೆ, ಈ ಆರೋಪವನ್ನು ಖೇಡ್ಕರ್ ಅಲ್ಲಗಳೆದಿದ್ದಾರೆ. ಗುರುವಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಖೇಡ್ಕರ್ ಪರ ವಕೀಲರು, ಯುಪಿಎಸ್‌ಸಿ ಹಾಗೂ ದೆಹಲಿ ಪೊಲೀಸರು ಮಾಡಿರುವ ಆರೋಪಗಳಿಗೆ ಉತ್ತರ ನೀಡಲು ಕಾಲಾವಕಾಶವನ್ನು ಕೋರಿದರು.
ಪೂಜಾ ಖೇಡ್ಕರ್ ವಿರುದ್ಧ ಯುಪಿಎಸ್‌ಸಿ, ದೆಹಲಿ ಪೊಲೀಸರು ಮಾಡಿರುವ ಆರೋಪಗಳೇನು?: ಕೇಂದ್ರ ಲೋಕಸೇವಾ ಆಯೋಗದ ಹುದ್ದೆಗಾಗಿ ಪೂಜಾ ಖೇಡ್ಕರ್, ಇತರ ಹಿಂದುಳಿದ ವರ್ಗಗಳು ಮತ್ತು ಅಂಗವಿಕಲ ಕೋಟಾದ ಮೀಸಲಾತಿ ದುರ್ಬಳಕೆ ಮಾಡಿಕೊಂಡಿದ್ದಾರೆ. ತಾವು ಅಂಗವಿಕಲೆ ಎಂದು ನಕಲಿ ದಾಖಲೆ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಪೊಲೀಸರು ಹಾಗೂ ಕೇಂದ್ರ ಲೋಕಸೇವಾ ಆಯೋಗ ಮಾಡಿರುವ ಎಲ್ಲ ಆರೋಪಗಳನ್ನು ಪೂಜಾ ಖೇಡ್ಕರ್ ನಿರಾಕರಿಸಿದ್ದು, ಈ ಸಂಬಂಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಈ ಪ್ರಕರಣದ ಅರ್ಜಿ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಜುಲೈ 31 ರಂದು ಪೂಜಾ ಖೇಡ್ಕರ್ ಅವರನ್ನು ಪ್ರೊಬೇಷನರಿ ಹುದ್ದೆಯಿಂದ ಅಮಾನತು ಮಾಡಿತ್ತು. ಜೊತೆಗೆ ಮುಂದಿನ ಎಲ್ಲ ಪರೀಕ್ಷೆಗಳಿಂದ ಅವರನ್ನು ನಿಷೇಧ ಹೇರಲಾಗಿದೆ ಎಂದು ಘೋಷಿಸಿತ್ತು.
ಇದನ್ನೂ ಓದಿ: ವಿವಾದಿತ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ಗೆ ಕೇಂದ್ರ ಸರ್ಕಾರ ಶಾಕ್: ಐಎಎಸ್ ಹುದ್ದೆಯಿಂದಲೇ ವಜಾ