ನವದೆಹಲಿ: ದೀಪಾವಳಿ ಹಿನ್ನೆಲೆ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರದ ಜೊತೆಗೆ ಆರ್ಥಿಕ ಅಭಿವೃದ್ಧಿ ಉದ್ದೇಶದಿಂದ ದೆಹಲಿಯಲ್ಲಿ 111ಕ್ಕಿಂತ ಹೆಚ್ಚು ಅಂಗಡಿಗಳಿಗೆ 24 ಗಂಟೆಗಳ ಕಾಲ ತೆರೆಯಲು ಮುಖ್ಯಮಂತ್ರಿ ಅತಿಶಿ ಅನುಮತಿ ನೀಡಿದ್ದಾರೆ. ದೆಹಲಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ಉಪಕ್ರಮಕ್ಕೆ ಮುಂದಾಗಿದೆ.
ದಿನದ 24ಗಂಟೆ ವ್ಯವಹಾರಕ್ಕೆ ಅನುಮತಿ ನೀಡುವಂತೆ ಕೋರಿ ದೆಹಲಿಯ ಕಾರ್ಮಿಕ ಇಲಾಖೆ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವನೆ ಸಲ್ಲಿಸಿತ್ತು. ಎಲ್ಲ ವಾಣಿಜ್ಯ, ಚಿಲ್ಲರೆ ವ್ಯಾಪಾರ ಮತ್ತು ಉದ್ಯಮ ವರ್ಗಗಳಿಗೆ ಈ ಅವಕಾಶ ನೀಡಲಾಗಿದೆ. ಈ ಅಂಗಡಿಗಳ ವ್ಯವಹಾರ ಚಟುವಟಿಕೆ ಕುರಿತು ಒಂದು ಕಣ್ಣಿಟ್ಟಿರಲಿದೆ. ಒಂದು ವೇಳೆ ಅಂಗಡಿಗಳು ನಿಯಮ ಉಲ್ಲಂಘಿಸಿದರೆ, ದೆಹಲಿ ಶಾಪ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ 1954 ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ಪ್ರಸ್ತಾಪ ದೆಹಲಿ ಲೆಫ್ಟಿನೆಂಟ್ ಗವರ್ನರ್ ಮುಂದಿದ್ದು, ಅಧಿಕೃತ ಮುದ್ರೆಯೊಂದೇ ಬಾಕಿ ಇದೆ.
24 ಗಂಟೆ ಬಾಗಿಲು ತೆರೆಯಲಿರುವ ಅಂಗಡಿಗಳು:ದೆಹಲಿ ಶಾಪ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ 1954ರ ಸೆಕ್ಷನ್ 14, 15 ಮತ್ತು 16ರ ಅನುಸಾರ 111 ಅಂಗಡಿಗಳಿಗೆ ದಿನದ 24 ಗಂಟೆ ತೆರೆಯಲು ಅವಕಾಶ ನೀಡಲಾಗಿದೆ. ಸದ್ಯ ಬೇಸಿಗೆಯಲ್ಲಿ ರಾತ್ರಿ 9 ರಿಂದ 7 ಮತ್ತು ಚಳಿಗಾಲದಲ್ಲಿ ರಾತ್ರಿ 8 ರಿಂದ ಬೆಳಗ್ಗೆ 8 ಗಂಟೆವರೆಗೆ ಅಂಗಡಿಗಳನ್ನು ತೆರೆಯಬಹುದಾಗಿದೆ. ಇದೀಗ 24 ಗಂಟೆ ಕಾರ್ಯ ನಿರ್ವಹಣೆಗೆ ಸರ್ಕಾರ ಮುಂದಾಗಿದ್ದು, ಇಂತಹ ಅಂಗಡಿಗಳಲ್ಲಿ ಮಹಿಳಾ ಕಾರ್ಮಿಕರು ಕಾರ್ಯ ನಿರ್ವಹಿಸುವಂತಿಲ್ಲ. ಗ್ರಾಹಕರು ಕಾಯುತ್ತಿದ್ದರೆ, ಅಂಗಡಿ ತೆರೆಯಲು ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.