ನವದೆಹಲಿ: ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಮೃತರನ್ನು ಹೀರಾ ಸಿಂಗ್ ಕಕ್ಕರ್ (48), ಪತ್ನಿ ನೀತು (40) ಮತ್ತು ಮಕ್ಕಳಾದ ರಾಬಿನ್ (22) ಮತ್ತು ಲಕ್ಷಯ್ (21) ಎಂದು ಗುರುತಿಸಲಾಗಿದೆ.
ಹೀರಾ ಸಿಂಗ್ ಕಕ್ಕರ್ ಛಾಯಾಗ್ರಾಹಕರಾಗಿದ್ದು, ಪ್ರೇಮ್‌ನಗರದಲ್ಲಿ ಎರಡು ಅಂತಸ್ತಿನ ಸ್ವಂತ ಮನೆ ಹೊಂದಿದ್ದಾರೆ. ಬೆಳಗ್ಗೆ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಎರಡು ಅಗ್ನಿಶಾಮಕ ವಾಹನಗಳ ಸಮೇತ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಕುಟುಂಬ ಸದಸ್ಯರನ್ನು ರಕ್ಷಿಸಿ, ರಾವ್ ತುಲಾರಾಮ್ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದರು.
ಇನ್ವರ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಪಕ್ಕದ ಸೋಫಾಕ್ಕೆ ಹರಡಿದೆ. ಇದರಿಂದಾಗಿ ಮನೆಯಲ್ಲಿ ದಟ್ಟ ಹೊಗೆ ಆವರಿಸಿ ಉಸಿರಾಟಕ್ಕೆ ತೊಂದರೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮನೆಗೆ ತೆರಳಿದಾಗ ಮುಖ್ಯ ಗೇಟ್ ಒಳಗಿನಿಂದ ಲಾಕ್ ಆಗಿತ್ತು. ಅದನ್ನು ಮುರಿದು ಸಿಬ್ಬಂದಿ ಒಳ ಪ್ರವೇಶಿಸಿದ್ದರು. ಹೀರಾ ಸಿಂಗ್ ಅವರ ತಾಯಿ ಸೀತಾ ದೇವಿ ಕಟ್ಟಡದ ನೆಲ ಮಹಡಿಯಲ್ಲಿ ಮಲಗಿದ್ದರು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿ: ಮತ್ತೊಂದೆಡೆ, ಸಫ್ದರ್‌ಜಂಗ್ ಆಸ್ಪತ್ರೆಯ ಹಳೆಯ ತುರ್ತು ಚಿಕಿತ್ಸಾ ಕಟ್ಟಡದಲ್ಲಿರುವ ಸ್ಟೋರ್ ರೂಂನಲ್ಲೂ ಇಂದು ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕಿಟಕಿ ಒಡೆದು ಕಟ್ಟಡದ ಮೂರನೇ ಮಹಡಿಯಿಂದ ನರ್ಸ್‌ವೊಬ್ಬರನ್ನು ರಕ್ಷಿಸಲಾಗಿದೆ. ಉಳಿದಂತೆ, ಬೆಂಕಿಯಿಂದ ಯಾವುದೇ ರೋಗಿಗೆ ತೊಂದರೆಯಾಗಿಲ್ಲ ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಅವಘಡ ಉಂಟಾಗಿದೆ. ತಕ್ಷಣವೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ 11 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ. ಕರ್ತವ್ಯದಲ್ಲಿದ್ದ ಡಾ.ಆಯುಷ್ ಮಾತನಾಡಿ, "ನೆಲ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ. ಕೆಲ ನರ್ಸಿಂಗ್ ಸಿಬ್ಬಂದಿ ಮೂರನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ವಯಸ್ಸಾದ ನರ್ಸ್‌ವೊಬ್ಬರನ್ನು ಕಿಟಕಿ ಒಡೆದು ಅಗ್ನಿಶಾಮಕ ದಳದವರು ರಕ್ಷಿಸಿದರು" ಎಂದು ಹೇಳಿದರು.