ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿ ಅವಧಿಯನ್ನು ಮಾರ್ಚ್ 26ರವರೆಗೆ ವಿಸ್ತರಿಸಿ ಶನಿವಾರ ದೆಹಲಿಯ ನ್ಯಾಯಾಲಯ ಆದೇಶಿಸಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರಿ, ವಿಧಾನ ಪರಿಷತ್ ಸದಸ್ಯರಾದ ಕವಿತಾ ಅವರನ್ನು ಹೈದರಾಬಾದ್‌ನಲ್ಲಿ ಮಾರ್ಚ್ 15ರಂದು ಕೇಂದ್ರ ತನಿಖಾ ಸಂಸ್ಥೆಯಾದ ಇಡಿ ಬಂಧಿಸಿದೆ. ದೆಹಲಿಯಲ್ಲಿ ಮದ್ಯದ ಪರವಾನಗಿಗಳ ದೊಡ್ಡ ಪಾಲು ಪಡೆಯಲು ಪ್ರತಿಯಾಗಿ ಸೌತ್ ಗ್ರೂಪ್ 100 ಕೋಟಿ ರೂ.ಗಳನ್ನು ಆಮ್ ಆದ್ಮಿ ಪಕ್ಷಕ್ಕೆ ಕಿಕ್ ಬ್ಯಾಕ್ ನೀಡಿದ್ದು, ಕವಿತಾ ಈ ಸೌತ್ ಗ್ರೂಪ್ನ ಪ್ರಮುಖ ಸದಸ್ಯೆಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.
ಹೈದರಾಬಾದ್‌ನಿಂದ ದೆಹಲಿಗೆ ಕವಿತಾ ಅವರನ್ನು ಇಡಿ ಅಧಿಕಾರಿಗಳು ಸ್ಥಳಾಂತರ ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆಗ ಏಳು ದಿನಗಳ ದಿನಗಳ ಕಾಲ ಕಸ್ಟಡಿಗೆ ನೀಡಿತ್ತು. ಇಂದಿಗೆ ಈ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಕವಿತಾ ಅವರನ್ನು ಕೋರ್ಟ್ಗೆ ಹಾಜರು ಪಡಿಸಿದ್ದರು. ಈ ವೇಳೆ, ಮತ್ತೆ ಐದು ದಿನಗಳ ಕಾಲ ಕವಿತಾ ಅವರನ್ನು ಕಸ್ಟಡಿಗೆ ಒಪ್ಪಿಸುವಂತೆ ಇಡಿ ಪರ ವಕೀಲರು ಕೋರ್ಟ್ಗೆ ಮನವಿ ಸಲ್ಲಿಸಿದರು. ಕವಿತಾ ಪರ ವಕೀಲರು ಪ್ರತಿವಾದ ಮಂಡಿಸಿದರು. ಬಳಿಕ ಕೋರ್ಟ್ ಮಾರ್ಚ್ 26ರವರೆಗೆ ಈ ಅವಧಿ ವಿಸ್ತರಿಸಿದೆ.
ಕವಿತಾ ಸಂಬಂಧಿ ಮನೆ ಮೇಲೆ ದಾಳಿ:ಇದೇ ವೇಳೆ, ಇಡಿ ಪರ ವಕೀಲರ ವಕೀಲರು ಕೋರ್ಟ್ನಲ್ಲಿ ಮತ್ತಷ್ಟು ಹೊಸ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಇದುವರೆಗೆ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆಯ ಸಮಯದಲ್ಲಿ ಮೊಬೈಲ್ ಫೋನ್ ಡೇಟಾದ ಫಾರ್ಮ್ಯಾಟಿಂಗ್ ವಿಧಿವಿಜ್ಞಾನ ವರದಿ ಪಡೆಯಲಾಗಿದೆ. ಈ ಫೋನ್ ಡೇಟಾವನ್ನು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ, ಮಾರ್ಚ್ 15ರಂದು ಕವಿತಾ ನಿವಾಸದ ಮೇಲೆ ದಾಳಿ ಸಂದರ್ಭದಲ್ಲಿ ಸೋದರಳಿಯ ಮೇಕಾ ಸರನ್ ಎಂಬುವರ ಮೊಬೈಲ್ ಸಹ ವಶಪಡಿಸಿಕೊಳ್ಳಲಾಗಿದೆ. ತನಿಖೆಗೆ ಹಾಜರಾಗುವಂತೆ ಎರಡು ಬಾರಿ ಕರೆ ಮಾಡಲಾಗಿತ್ತು. ಆದರೆ, ಅವರು ತನಿಖೆಗೆ ಹಾಜರಾಗಿಲ್ಲ. ಆಪಾದಿತ ಹಣ ವರ್ಗಾವಣೆ ಅಥವಾ ಬಳಕೆಯಲ್ಲಿ ಸರನ್ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಇಡಿ ಕೋರ್ಟ್ನಲ್ಲಿ ಮಾಹಿತಿ ನೀಡಿದೆ.
ಈ ಪ್ರಕರಣದ ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಮೇಕಾ ಸರನ್ ಹೊಂದಿದ್ದಾರೆ. ಆದರೆ, ತನಿಖೆಗೆ ಸಹಕರಿಸದ ಕಾರಣ ಹೈದರಾಬಾದ್‌ನಲ್ಲಿ ಅವರಿಗೆ ಸಂಬಂಧಿಸಿದ ಸ್ಥಳದಲ್ಲಿ ಶನಿವಾರ ಶೋಧ ಕಾರ್ಯ ನಡೆಸಲಾಗುತ್ತಿದೆ. ಸರನ್ ಕವಿತಾ ಅವರ ಹತ್ತಿರದ ಸಂಬಂಧಿಯಾಗಿದ್ದು, ಇಡಿ ದಾಳಿ ನಡೆಸಿದಾಗ ಮನೆಯಲ್ಲಿದ್ದರು. ಕೆಲವು ಕುಟುಂಬದ ವ್ಯವಹಾರದ ವಿವರಗಳು, ಕುಟುಂಬದ ವ್ಯವಹಾರದ ಹಣಕಾಸು ಇತ್ಯಾದಿಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇತ್ತೀಚಿನ ತನಿಖೆಯ ಬಗ್ಗೆಯೂ ಕವಿತಾ ಅವರನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ತಮ್ಮ ಇಡಿ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಇಡಿ ಕಸ್ಟಡಿಯಿಂದಲೇ ಪತ್ರ ಬರೆದ ಕೇಜ್ರಿವಾಲ್: ಈ ಸಂದೇಶ ಜನರಿಗೆ ಮುಟ್ಟಿಸಿದ ಪತ್ನಿ ಸುನಿತಾ - Sunita kejriwal Press meet