ನವದೆಹಲಿ:ಸರ್ಕಾರಿ ಭೂಮಿ ಅನಧಿಕೃತ ಒತ್ತುವರಿ ಮತ್ತು ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿಸಿರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ), ಛತ್ತರ್‌ಪುರದಲ್ಲಿ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅವರ 400 ಕೋಟಿ ರೂಪಾಯಿ ಮೌಲ್ಯದ ಫಾರ್ಮ್‌ಹೌಸ್ ಧ್ವಂಸಗೊಳಿಸಿದೆ.
ಹೈಪ್ರೊಫೈಲ್ ಲಿಕ್ಕರ್ ಮಾರಾಟಗಾರ ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ 10 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಫಾರ್ಮ್‌ಹೌಸ್ ಅನ್ನು ಕೆಡವಲಾಗಿದೆ. ಶುಕ್ರವಾರ (ಮಾರ್ಚ್ 1) 5 ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲಾಗಿತ್ತು. ಶನಿವಾರ ಉಳಿದ ಐದು ಎಕರೆಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 ಎಕರೆಯಲ್ಲಿ ಮನೆ ನಿರ್ಮಾಣ:ಒಟ್ಟಾರೆ 10 ಎಕರೆ ಪ್ರದೇಶದಲ್ಲಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಫಾರ್ಮ್‌ಹೌಸ್ ನಿರ್ಮಾಣ ಮಾಡಲಾಗಿತ್ತು. ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಭಾಗದಲ್ಲಿ ಸರ್ಕಾರ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಡಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಜನವರಿ 13ರಿಂದ ಜನವರಿ 17ರ ನಡುವೆ ಗೋಕುಲಪುರಿಯಲ್ಲಿ ನಡೆಸಲಾದ ತೆರವು ಕಾರ್ಯಾಚರಣೆಯಲ್ಲಿ 4 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದ್ದ ವಾಣಿಜ್ಯ ಶೋರೂಮ್‌ಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.