ನವದೆಹಲಿ :ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಅವರ ಸಂಪುಟ ಸಚಿವರು ವಾಸ್ತವ್ಯಕ್ಕೆ ಸರ್ಕಾರಿ ಬಂಗಲೆ ಹುಡುಕಾಟಕ್ಕೆ ಮುಂದಾಗಿದ್ದಾರೆ. ಇದೀಗ ದೆಹಲಿ ಸಿಎಂಗೆ ಶಾಶ್ವತ ಸರ್ಕಾರಿ ನಿವಾಸವಿಲ್ಲದಿರುವುದು ಇದಕ್ಕೆ ಕಾರಣವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಬದಲಾವಣೆಯಾದಾಗಲೆಲ್ಲಾ ಮುಖ್ಯಮಂತ್ರಿಗಳ ನಿವಾಸ ಕೂಡ ಬದಲಾಗುತ್ತಲೇ ಇರುತ್ತದೆ.
ರೇಖಾ ಗುಪ್ತಾ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಳೆದೆರಡು ದಿನಗಳಲ್ಲಿ ದೆಹಲಿ ಸೆಕ್ರೆಟೇರಿಯೇಟ್ನಲ್ಲಿ ವಿವಿಧ ಇಲಾಖೆಯಲ್ಲಿ ಸಭೆಯನ್ನು ನಡೆಸಿದ್ದಾರೆ. ಸದ್ಯ ಶಾಲಿಮಾರ್ ಬಾಗ್ನಲ್ಲಿ ಖಾಸಗಿ ನಿವಾಸದಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ. ಶೀಶ್ ಮಹಲ್ನಲ್ಲಿ ವಾಸ್ತವ್ಯ ಹೂಡಲು ಅವರು ನಿರಾಕರಿಸಿದ್ದು, ಅದಕ್ಕೆ ಪರ್ಯಾಯ ನಿವಾಸದ ಹುಡುಕಾಟ ನಡೆಸಿದ್ದಾರೆ. ಆದರೆ, ಇನ್ನು ಯಾವ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬುದನ್ನು ನಿರ್ಧರಿಸಿಲ್ಲ ಎಂದು ವರದಿಯಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಸಿಎಂ ನಿವಾಸ ಕುರಿತು ಮಾತನಾಡಿದ್ದ ಆಡಳಿತರೂಢ ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಸಚ್ದೇವ್, ತಮ್ಮ ಸರ್ಕಾರ ರಚನೆಯಾದಲ್ಲಿ ನಮ್ಮ ಸಿಎಂ ಈ ಹಿಂದೆ ಕೇಜ್ರಿವಾಲ್ ನೆಲೆಸಿದ್ದ ಶೀಶ್ಮಹಲ್ನಲ್ಲಿ ನೆಲೆಸುವುದಿಲ್ಲ ಎಂದಿದ್ದರು. ಇದೀಗ ಈ ಕುರಿತು ರೇಖಾ ಗುಪ್ತಾ ಕೂಡ ವಿವಾದಾತ್ಮಕ ಬಂಗಲೆಯಲ್ಲಿ ತಾವು ನೆಲೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ, ಈ ಶೀಶಮಹಲ್ ನಿರ್ಮಾಣದ ಅಕ್ರಮದ ಆರೋಪ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆ ಲೋಕೋಪಯೋಗಿ ಇಲಾಖೆಯು ಸಿಎಂ ರೇಖಾ ಗುಪ್ತಾ ಅವರ ಸರ್ಕಾರಿ ನಿವಾಸಕ್ಕೆ ಮತ್ತಷ್ಟು ಆಯ್ಕೆ ನೀಡಲಿದೆ. ಸಿವಿಲ್ ಲೈನ್, ದರ್ಯಾಗಂಜ್ ರಸ್ತೆ ಮತ್ತು ಮಥುರಾ ರಸ್ತೆಯಲ್ಲಿರುವ ಬಂಗಲೆಗಳ ಹುಡುಕಾಟವೂ ಸಾಗಿದೆ. ಆದರೆ, ಈ ಕುರಿತ ಅಂತಿಮ ನಿರ್ಧಾರ ಸಿಎಂ ರೇಖಾ ಗುಪ್ತಾ ಅವರದ್ದಾಗಿದೆ.