ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಪಾರ ಪ್ರಮಾಣದ ಪಟಾಕಿ ಸಿಡಿಸಿರುವುದು ದೆಹಲಿ ವಾಯು ಗುಣಮಟ್ಟ ಕ್ಷೀಣಿಸುವಿಕೆಗೆ ಕಾರಣ ಎನ್ನಲಾಗುತ್ತದೆ. ಆದರೆ, ಹಬ್ಬ ಕಳೆದ ಹಲವು ದಿನಗಳ ಬಳಿಕವೂ ಯಾವುದೇ ಸುಧಾರಣೆ ಕಂಡಿಲ್ಲ. ದಿನದಿಂದ ದಿನಕ್ಕೆ ವಾಯು ಗುಣಮಟ್ಟ ಕಳಪೆಯಾಗುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಯ ಭೀತಿ ಎದುರಾಗಿದೆ.
ವಾಯು ಗುಣಮಟ್ಟ ಬುಧವಾರ ತೀವ್ರ ಕಳಪೆಯಾಗಿತ್ತು. ನಗರದೆಲ್ಲೆಡೆ ದಟ್ಟ ಮಂಜು ಮುಸುಕಿದ ವಾತಾವರಣವಿದೆ ಎಂದು ಕೇಂದ್ರೀಯ ಮಾಲಿನ್ಯ ಮಂಡಳಿ ತಿಳಿಸಿದೆ.
ಕೇಂದ್ರೀಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಕಾರ, ವಾಯು ಗುಣಮಟ್ಟ ಗುರುವಾರ 8 ಗಂಟೆಯ ಸುಮಾರಿಗೆ ಎಕ್ಯೂಐ 428 ದಾಖಲಾಗಿದೆ. ಪ್ರತಿನಿತ್ಯ ಸಂಜೆ 4 ಗಂಟೆಯ ಸುಮಾರಿಗೆ ಎಕ್ಯೂಐ ದಾಖಲಿಸಲಾಗುತ್ತದೆ. ಬುಧವಾರ ಈ ಸೂಚ್ಯಂಕ 418 ಇದ್ದರೆ, ಇದರ ಹಿಂದಿನ ದಿನ 334 ಇತ್ತು. ಇದು ಅಪಾಯಕಾರಿ ಪರಿಸ್ಥಿತಿಗಳನ್ನು ತಗ್ಗಿಸಲು ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿಆರ್ಎಪಿ)ನಡಿ ಕಠಿಣ ನಿರ್ಬಂಧ ಹೇರಿಕೆಗೆ ಕಾರಣವಾಗಬಹುದು.