ನವದೆಹಲಿ:ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ದೇವರ ಮೂರ್ತಿ ಪ್ರಾಣ ಪ್ರತಿಪ್ಠಾಪನೆ ಸಮಾರಂಭ ನಿಮಿತ್ತ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಘೋಷಿಸಿದ್ದ ರಜೆಯಲ್ಲಿ ಮಾರ್ಪಾಡು ಮಾಡಿದೆ. ಸೋಮವಾರ ಅರ್ಧ ರಜೆ ಇರುತ್ತದೆ. ಆದರೆ, ರೋಗಿಗಳ ಆರೈಕೆಗೆ ತಡೆರಹಿತ ಸೇವೆಗಳನ್ನು ಒದಗಿಸಲು ಎಲ್ಲ ನಿರ್ಣಾಯಕ ಕ್ಲಿನಿಕಲ್ ಸೇವೆಗಳು ತಮ್ಮ ಕಾರ್ಯಾಚರಣೆಗಳನ್ನು ಮುಂದುವರಿಸುತ್ತವೆ ಎಂದು ಏಮ್ಸ್ ಸ್ಪಷ್ಟಪಡಿಸಿದೆ.
ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಪ್ಠಾಪನೆ ಅಂಗವಾಗಿ ಜನವರಿ 22ರಂದು ಕೇಂದ್ರ ಸರ್ಕಾರವು ಎಲ್ಲ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ಎಂದರೆ, ಬೆಳಗ್ಗೆಯಿಂದ ಮಧ್ಯಾಹ್ನ 2.30ರ ರಜೆ ಘೋಷಿಸಿ ಆದೇಶಿದೆ. ಅಂತೆಯೇ, ದೇಶದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಯಾದ ಏಮ್ಸ್ ಕೂಡ ಶನಿವಾರ ಆಸ್ಪತ್ರೆಯನ್ನು ಮಧ್ಯಾಹ್ನ 2:30ರ ವರೆಗೆ ಮುಚ್ಚಲಾಗುವುದು ಎಂದು ಶನಿವಾರ ಘೋಷಿಸಿತ್ತು. ಅಲ್ಲದೇ, ತುರ್ತು ಸೇವೆಗಳು ಮುಂದುವರೆಯುತ್ತವೆ ಎಂದು ತನ್ನ ಆದೇಶ ತಿಳಿಸಿತ್ತು. ಆದರೆ, ಈಗ ಹೊಸ ಆದೇಶದ ಪ್ರಕಾರ, ಒಪಿಡಿ ಸೇರಿದಂತೆ ಎಲ್ಲ ರೋಗಿಗಳ ಆರೈಕೆ ಸೇವೆಗಳು ಸೋಮವಾರ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಪ್ಠಾಪನೆ ಕಾರ್ಯಕ್ರಮವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಜನವರಿ 22ರಂದು 2.30ರ ವರೆಗೆ ಏಮ್ಸ್ ಸಂಸ್ಥೆಯು ಅರ್ಧ ದಿನ ಮುಚ್ಚಿರುತ್ತದೆ ಎಂದು ಎಲ್ಲ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಎಲ್ಲ ಕೇಂದ್ರಗಳ ಮುಖ್ಯಸ್ಥರು, ಇಲಾಖೆಗಳ ಮುಖ್ಯಸ್ಥರು, ಘಟಕಗಳು ಮತ್ತು ಶಾಖಾಧಿಕಾರಿಗಳು ಮತ್ತು ಅವರ ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿ ಎಲ್ಲರ ಗಮನಕ್ಕೆ ತರಲು ಇದನ್ನು ಮಾಡಲಾಗಿದೆ ಎಂದು ಏಮ್ಸ್ ಹೇಳಿದೆ. ಆದಾಗ್ಯೂ, ಫೆಬ್ರವರಿ 2ರ ವರೆಗೆ ಒಂದು ತಿಂಗಳ ಅವಧಿಗೆ ಏಮ್ಸ್ ಸಂಸ್ಥೆಯು ಹೈ ಅಲರ್ಟ್‌ನಲ್ಲಿರುವುದರಿಂದ ಎಲ್ಲ ಕ್ರಿಟಿಕಲ್ ಕ್ಲಿನಿಕಲ್ ಸೇವೆಗಳು ಕಾರ್ಯನಿರ್ವಹಿಸುತ್ತವೆ ಎಂದು ಸ್ಪಷ್ಟನೆ ನೀಡಿದೆ.
ಮತ್ತೊಂದೆಡೆ, ಒಡಿಶಾದ ಭುವನೇಶ್ವರ ಏಮ್ಸ್ ಸಹ ಸೋಮವಾರ ಮಧ್ಯಾಹ್ನ 2.30ರ ವರೆಗೆ ಅರ್ಧ ದಿನ ರಜೆ ಘೋಷಿಸಿದೆ. ನೌಕರರು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಆಚರಣೆಗಳಲ್ಲಿ ಭಾಗವಹಿಸಲು ಸಂಸ್ಥೆಯು ಅನುವು ಮಾಡಿಕೊಡುತ್ತದೆ. ಆದರೆ, ಆಸ್ಪತ್ರೆಯ ಅಗತ್ಯ ಸೇವೆಗಳಿಗೆ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದೆ. ಇದೇ ವೇಳೆ, ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯು ಕೂಡ ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದೆ.