ಕರ್ನಾಟಕ

karnataka

ETV Bharat / bharat

ಡಾರ್ಜಿಲಿಂಗ್‌: ಮೊದಲ ಕೊಯ್ಲಿನ 1 ಕೆಜಿ ಚಹಾ ಪುಡಿ ₹ 31 ಸಾವಿರಕ್ಕೆ ಮಾರಾಟ! - Darjeeling Tea - DARJEELING TEA

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಮೊದಲ ಕೊಯ್ಲಿನ ಸಾವಯವ ಬಿಳಿ ಚಹಾ ಪುಡಿಯು ಕೆಜಿಯೊಂದಕ್ಕೆ 31,000 ರೂ.ಗೆ ಮಾರಾಟವಾಗಿದೆ.

darjeeling-premium-first-flush-tea-fetches-a-price-of-rs-31000-per-kg
ಡಾರ್ಜಿಲಿಂಗ್‌: ಮೊದಲ ಕೊಯ್ಲಿನ 1 ಕೆಜಿ ಚಹಾ ಪುಡಿ ₹ 31 ಸಾವಿರಕ್ಕೆ ಮಾರಾಟ!

By ETV Bharat Karnataka Team

Published : Mar 27, 2024, 4:28 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪ್ರಸ್ತುತ ಋತುವಿನ ಆರಂಭದಲ್ಲೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಚಹಾ ಪುಡಿ ಉತ್ತಮ ಬೆಲೆ ಗಿಟ್ಟಿಸಿಕೊಂಡಿದೆ. ಮೊದಲ ಕೊಯ್ಲಿನ ಪ್ರೀಮಿಯಂ ವಿಧದ ಚಹಾ ಪುಡಿಯು ಒಂದು ಕೆಜಿಗೆ 31,000 ರೂ.ಗಳ ಬೆಲೆಯೊಂದಿಗೆ ಪ್ರಬಲ ಆರಂಭ ಪಡೆದಿದೆ. ಇದು ಕಳೆದ ವರ್ಷದ ಮೊದಲ ಕೊಯ್ಲಿನ ಚಹಾ ಪುಡಿ ಬೆಲೆಗಿಂತ 4,000 ರೂ. ಅಧಿಕವಾಗಿದೆ.

ಹವಾಮಾನ ವೈಪರೀತ್ಯದಿಂದ ದೀರ್ಘವಾದ ಒಣಹವೆ ಇತ್ತು. ಇದೀಗ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಈ ಮಾರ್ಚ್‌ನಲ್ಲಿ ಡಾರ್ಜಿಲಿಂಗ್ ಮೊದಲ ಕೊಯ್ಲಿನ ಚಹಾದ ಉತ್ಪಾದನೆಯು ಕಡಿಮೆಯಾಗಿದೆ. ಇದರ ನಡುವೆಯೂ ಗುಡ್ರಿಕ್ ಗ್ರೂಪ್‌ನ ಬಾದಾಮ್‌ಟಮ್ ಟೀ ಎಸ್ಟೇಟ್‌ನಿಂದ ಡಾರ್ಜಿಲಿಂಗ್‌ನ ಪ್ರಮುಖ ಟೀ ಕಂಪನಿಯಾದ ಗೋಲ್ಡನ್ ಟಿಪ್ಸ್​, ಹೊಸ ಋತುವಿನ ಚಹಾ ಪುಡಿಯನ್ನು ದಾಖಲೆ ಬೆಲೆಗೆ ಖರೀದಿಸಿದೆ. ಸಾವಯವ ಬಿಳಿ ಚಹಾ ಪುಡಿಯನ್ನು ಕೆಜಿಗೆ 31,000 ರೂ. ನೀಡಿ ಖರೀದಿ ಮಾಡಿದೆ.

ಉತ್ತಮ ಗುಣಮಟ್ಟದ ಎಸ್​ವೈ-1240 ತಳಿಯಿಂದ ಈ ಚಹಾ ಪುಡಿ ಉತ್ಪಾದಿಸಲಾಗಿದೆ. ಈ ಚಹಾ ಪುಡಿಯು ದಪ್ಪನಾದ ಬಿಳಿ ತುದಿಯನ್ನು ಹೊಂದಿರುತ್ತದೆ. ಇದು ತಿಳಿ ಹಸಿರು ದ್ರಾವಣ ಮತ್ತು ಹಣ್ಣಿನ ಪೀಚ್ ತರಹದ ಪರಿಮಳ ನೀಡುತ್ತದೆ. ಗೋಲ್ಡನ್ ಟಿಪ್ಸ್​ ಕಂಪನಿಯು 5 ಕೆಜಿ ಈ ಬಿಳಿ ಚಹಾ ಪುಡಿಯನ್ನು ಖರೀದಿಸಿದೆ. ಈ ಹೆಚ್ಚಿನ ಬೆಲೆಯ ಚಹಾ ಪುಡಿಯನ್ನು ಮುಖ್ಯವಾಗಿ ಯುರೋಪ್ ಮತ್ತು ಜಪಾನ್‌ನಂತಹ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

ಸಮುದ್ರ ಮಟ್ಟದಿಂದ ಸುಮಾರು 4,500 ಅಡಿ ಎತ್ತರದಲ್ಲಿರುವ ಎಸ್ಟೇಟ್‌ನಿಂದ ಈ ಚಹಾವನ್ನು ಕೆಲವು ದಿನಗಳ ಹಿಂದೆ ಕೊಯ್ಲು ಮಾಡಲಾಗಿದೆ. ಬಿಸಿಲು, ತೇವಾಂಶ, ಮಣ್ಣಿನ ಗುಣಮಟ್ಟ ಮತ್ತು ಗಾಳಿಯ ವಿಶೇಷ ಸಂಯೋಜನೆ ಒಳಗೊಂಡಿರುವ ಪ್ರದೇಶದ ಪರಿಸರವು ಈ ಚಹಾಕ್ಕೆ ವಿಶಿಷ್ಟವಾದ ರುಚಿ ಮತ್ತು ಗುಣಮಟ್ಟವನ್ನು ನೀಡುತ್ತದೆ. ದೀರ್ಘ ಚಳಿಗಾಲದ ಸುಪ್ತಾವಸ್ಥೆಯ ನಂತರ ಬೆಳೆದ ಸೂಕ್ಷ್ಮವಾದ ಕೋಮಲ ಮೊಗ್ಗುಗಳು ಮತ್ತು ರಸಭರಿತವಾದ ಎಲೆಗಳನ್ನು ವಿಶೇಷವಾಗಿ ತರಬೇತಿ ಪಡೆದ ಕಾರ್ಮಿಕರು ಎಚ್ಚರಿಕೆಯಿಂದ ಕಿತ್ತು ನಂತರ ಬಿದಿರಿನ ಬುಟ್ಟಿಗಳಲ್ಲಿ ಸಾಗಿಸುತ್ತಾರೆ.

ಗೋಲ್ಡನ್ ಟಿಪ್ಸ್‌ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಾಧವ್ ಸರ್ದಾ ಮಾತನಾಡಿ, ಕಳೆದ ಕೆಲವು ದಶಕಗಳಿಂದ ನಾವು ಪ್ರತಿಷ್ಠಿತ ಚಹಾ ತೋಟಗಳಿಂದ ಉನ್ನತ ದರ್ಜೆಯ ಚಹಾ ಪುಡಿ ಪಡೆಯುತ್ತಿದ್ದೇವೆ. ಬಾದಾಮ್‌ಟಮ್ ಟೀ ಎಸ್ಟೇಟ್‌ನಿಂದ ಮತ್ತೊಮ್ಮೆ ಅತ್ಯಂತ ವಿಶಿಷ್ಟ ಚಹಾ ಪುಡಿಯನ್ನು ಸಂಗ್ರಹಿಸಲು ನಮಗೆ ಸಂತೋಷವಾಗಿದೆ. ಪ್ರಪಂಚದಾದ್ಯಂತದ ಚಹಾ ಪ್ರಿಯರಿಗೆ ವಿಶ್ವ ದರ್ಜೆಯ ಚಹಾ ಅನುಭವವನ್ನು ಒದಗಿಸುವ ನಮ್ಮ ಸಾಮಾನ್ಯ ದೃಷ್ಟಿಯು ನಮ್ಮನ್ನು ನೈಸರ್ಗಿಕ ಪಾಲುದಾರರನ್ನಾಗಿ ಮಾಡಿದೆ ಎಂದು ತಿಳಿಸಿದರು.

ಡಾರ್ಜಿಲಿಂಗ್ ಟೀ ಎಸ್ಟೇಟ್‌ಗಳಲ್ಲಿ ಈಗ ವಾರ್ಷಿಕವಾಗಿ 6.5 ರಿಂದ 6.8 ಮಿಲಿಯನ್ ಕೆಜಿ ಚಹಾ ಪುಡಿಯನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ ಶೇ.20ರಷ್ಟು ಮೊದಲ ಕೊಯ್ಲು, ಉಳಿದ ಶೇ.80ರಷ್ಟು ಚಹಾ ಪುಡಿಯಲ್ಲಿ ಶೇ.20ರಷ್ಟು ಎರಡನೇ ಕೊಯ್ಲಿನ ಚಹಾ ಪುಡಿ ಇರುತ್ತದೆ. ಇನ್ನುಳಿದ ಶೇ.60ರಷ್ಟು ಚಹಾ ಪುಡಿಯನ್ನು ಮಳೆ ಚಹಾ ಪುಡಿ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:ದೇಶದ ಒಟ್ಟಾರೆ ಚಹಾ ಉತ್ಪಾದನೆಯಲ್ಲಿ ಶೇ 53ರಷ್ಟು ಕೊಡುಗೆ ನೀಡುತ್ತಿರುವ ಸಣ್ಣ ಟೀ ಬೆಳೆಗಾರರು

ABOUT THE AUTHOR

...view details