ತಿರುವನಂತಪುರಂ:ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ಚೆಲಕ್ಕರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ ಮತದಾನ ನಡೆಯುತ್ತಿರುವ ಮಧ್ಯೆ ಕೇರಳದಲ್ಲಿ ಹಿರಿಯ ಸಿಪಿಐ(ಎಂ) ನಾಯಕ ಇ.ಪಿ.ಜಯರಾಜನ್ ಅವರ ಇನ್ನೂ ಪ್ರಕಟವಾಗದ ಆತ್ಮಚರಿತ್ರೆಯು ಹೊಸ ವಿವಾದ ಸೃಷ್ಟಿಸಿದೆ. ಇಂದು ಬೆಳಗ್ಗೆ ಕೆಲ ಟಿವಿ ಚಾನೆಲ್ಗಳು ಇ.ಪಿ. ಜಯರಾಜನ್ ಅವರ ಆತ್ಮಚರಿತ್ರೆಯ ಭಾಗವೆಂದು ಹೇಳಲಾದ ಕೆಲ ಮಾಹಿತಿಗಳನ್ನು ಪ್ರಸಾರ ಮಾಡಿವೆ. ಎಲ್ಡಿಎಫ್ ಸರ್ಕಾರ ಮತ್ತು ಮಾರ್ಕ್ಸ್ವಾದಿ ಪಕ್ಷದ ಬಗ್ಗೆ ಆತ್ಮಚರಿತ್ರೆಯಲ್ಲಿ ಟೀಕೆ ಮಾಡಲಾಗಿದೆ ಎಂದು ಈ ಮಾಹಿತಿಗಳು ಬಿಂಬಿಸಿವೆ.
ಉಪಚುನಾವಣೆಯ ಮತದಾನದ ಮಧ್ಯದಲ್ಲೇ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯಿಸಿದ ಜಯರಾಜನ್, ತಮ್ಮ ಆತ್ಮಚರಿತ್ರೆಯಲ್ಲಿ ಅಂಥ ಯಾವುದೇ ಮಾತುಗಳಿಲ್ಲ ಮತ್ತು ಟಿವಿಯಲ್ಲಿ ತೋರಿಸಿರುವುದನ್ನು ತಾವು ಬರೆದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಕಣ್ಣೂರಿನ ಪ್ರಬಲ ರಾಜಕೀಯ ವ್ಯಕ್ತಿಯಾಗಿರುವ ಜಯರಾಜನ್ ತಮ್ಮ ಆತ್ಮಚರಿತ್ರೆಯಲ್ಲಿ ತಮ್ಮನ್ನು ಎಲ್ಡಿಎಫ್ ಸಂಚಾಲಕ ಸ್ಥಾನದಿಂದ ತೆಗೆದುಹಾಕಿದ ಪಕ್ಷದ ನಿರ್ಧಾರದ ಬಗ್ಗೆ ಮತ್ತು ಪಾಲಕ್ಕಾಡ್ನಲ್ಲಿ ಎಲ್ಡಿಎಫ್ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಕೆಪಿಸಿಸಿ ಡಿಜಿಟಲ್ ಮಾಧ್ಯಮ ಸಂಚಾಲಕ ಪಿ ಸರಿನ್ ಅವರಿಗೆ ಟಿಕೆಟ್ ನೀಡಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ ಅಪ್ರಕಟಿತ ಪುಸ್ತಕದ ಭಾಗಗಳು ತೋರಿಸಿವೆ.