ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (ನೀಟ್-ಯುಜಿ, NEET-UG) 2024ರ ಕೌನ್ಸೆಲಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತಿಳಿಸಿದೆ.
ಕೌನ್ಸೆಲಿಂಗ್ ಪ್ರಕ್ರಿಯೆಯ ನೋಂದಣಿ ಆಗಸ್ಟ್ ಮೊದಲ ವಾರದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಅಭ್ಯರ್ಥಿಗಳು ಕೌನ್ಸೆಲಿಂಗ್‌ಗಾಗಿ ಇತ್ತೀಚಿನ ಮಾಹಿತಿ ಮತ್ತು ಸೂಚನೆಗಳಿಗಾಗಿ ವೈದ್ಯಕೀಯ ಕೌನ್ಸೆಲಿಂಗ್ ಕಮಿಟಿ (ಎಂಸಿಸಿ) ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಆಯೋಗದ ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್ ತಿಳಿಸಿದ್ದಾರೆ.
ದೇಶದಾದ್ಯಂತ ಸುಮಾರು 710 ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 1.10 ಲಕ್ಷ ಎಂಬಿಬಿಎಸ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಯುತ್ತದೆ. ಅಲ್ಲದೇ, ಆಯುಷ್ ಮತ್ತು ನರ್ಸಿಂಗ್ ಸೀಟುಗಳ ಜೊತೆಗೆ 21,000 ಬಿಡಿಎಸ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಯಲಿದೆ. ಎಂಸಿಸಿಯು ಶೇ.15ರಷ್ಟು ಅಖಿಲ ಭಾರತ ಕೋಟಾದ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಿದೆ. ಎಲ್ಲ ಏಮ್ಸ್ಗಳು, ಜೆಐಪಿಎಂಇಆರ್ ಪಾಂಡಿಚೇರಿ, ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳು, ಡೀಮ್ಡ್ ಯೂನಿವರ್ಸಿಟಿ ಸೀಟುಗಳ ಶೇ.100ರಷ್ಟು ಸೀಟುಗಳಿಗೆ ಕೌನ್ಸೆಲಿಂಗ್ ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನೀಟ್-ಯುಜಿ ಪರೀಕ್ಷೆ ಸಾಕಷ್ಟು ವಿವಾದದಲ್ಲಿ ಸಿಲುಕಿತ್ತು. ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಸೇರಿದಂತೆ ಹಲವು ವಿಷಯಗಳ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಲೇವಾರಿ ಮಾಡಿದ ನಂತರ ಅಂತಿಮ ಪರಿಷ್ಕೃತ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿತ್ತು. ಇದರಲ್ಲಿ ಟಾಪರ್ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಈಗಿನ ಪಟ್ಟಿಯಲ್ಲಿ ಕೇವಲ 17 ಅಭ್ಯರ್ಥಿಗಳು ಮಾತ್ರ ಟಾಪರ್ಗಳಾಗಿದ್ದಾರೆ. ಈ ಹಿಂದೆ ಪ್ರಕಟಿಸಲಾಗಿದ್ದ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು ಟಾಪರ್ಸ್ ಆಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ:ನೀಟ್ ಪರಿಷ್ಕೃತ ಫಲಿತಾಂಶ: ಟಾಪರ್ ಆಗಿದ್ದ ರಾಜ್ಯದ ಮೂವರ ಸ್ಥಾನದಲ್ಲಿ ಭಾರಿ ಕುಸಿತ, ಪದ್ಮನಾಭ್ ಮೆನನ್ಗೆ 21ನೇ ರ್‍ಯಾಂಕ್