ಮೊರೆನಾ (ಮಧ್ಯಪ್ರದೇಶ): ಇಂದು ದೇಶದಲ್ಲಿ ದ್ವೇಷ ಮತ್ತು ಪ್ರೀತಿಯ ಸಿದ್ಧಾಂತಗಳ ಸಂಘರ್ಷ ನಡೆಯುತ್ತಿದೆ. ಒಂದೆಡೆ ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ನ್ಯಾಯ್ ಯಾತ್ರೆ ನಿಮಿತ್ತ ಮಧ್ಯಪ್ರದೇಶದ ಮೊರೆನಾದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ನಾವು ಭಾರತ್ ಜೋಡೋ ಯಾತ್ರೆ ಮಾಡಿದ್ದೆವು. ಅದರಲ್ಲಿ ಸಾವಿರಾರು ಜನರು ನಮ್ಮೊಂದಿಗೆ ಭಾಗವಹಿಸಿದ್ದರು. ಯಾತ್ರೆ ಮೂಲಕ ನೇರವಾಗಿ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಭಾರತ್ ಜೋಡೋ ಯಾತ್ರೆಯ ನಂತರ ನಾವು ಮಣಿಪುರದಿಂದ ಮಹಾರಾಷ್ಟ್ರಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಿದ್ದೇವೆ. ಈ ಬಾರಿ ಪ್ರಯಾಣದಲ್ಲಿ ನಾವು 'ನ್ಯಾಯ' ಪದವನ್ನು ಸೇರಿಸಿದ್ದೇವೆ. ಯಾಕೆಂದರೆ, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ದೇಶದಲ್ಲಿ ಹರಡುತ್ತಿರುವ ದ್ವೇಷ ಮತ್ತು ಹಿಂಸಾಚಾರಕ್ಕೆ ಕಾರಣವೇನು ಎಂದು ನಾನು ಜನರನ್ನು ಕೇಳಿದೆ. ಇದಕ್ಕೆಲ್ಲ 'ಅನ್ಯಾಯ'ವೇ ಕಾರಣ ಎಂದು ಜನತೆ ಉತ್ತರಿಸಿದರು. ದೇಶದಲ್ಲಿ ಜನರಿಗೆ ವಿವಿಧ ರೀತಿಯಲ್ಲಿ ಅನ್ಯಾಯವಾಗುತ್ತಿದೆ. ಅದಕ್ಕಾಗಿಯೇ ದೇಶದಲ್ಲಿ ದ್ವೇಷ ಹರಡಲಾಗುತ್ತಿದೆ. ಈಗ ದೇಶದಲ್ಲಿ ಅನ್ಯಾಯವೇ ದೊಡ್ಡ ಸಮಸ್ಯೆಯಾಗಿದೆ. ಈ ಅನ್ಯಾಯದ ವಿರುದ್ಧ ನ್ಯಾಯದ ಸಮರ ಮುಂದುವರಿದಿದೆ. ನ್ಯಾಯದ ಸಂಕಲ್ಪ ಮತ್ತು ಗೆಲುವಿನ ವಿಶ್ವಾಸದೊಂದಿಗೆ ನಾವು ನಮ್ಮ ಗುರಿಯತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.
ಎಂಎಸ್‌ಪಿ ಕಾನೂನು: ಇದೇ ವೇಳೆ, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರೈತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ರಕ್ಷಣೆ ನೀಡಲಾಗುವುದು. ಈ ಭರವಸೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಇರಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನಾವು ದೇಶದ ರೈತರಿಗೆ ಕಾನೂನುಬದ್ಧ ಎಂಎಸ್‌ಪಿ ನೀಡುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೊಡ್ಡ ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಿದ್ದು, ರೈತರ ಹಿತಾಸಕ್ತಿಗಳನ್ನು ಕಡೆಗಣಿಸಿದೆ. ಬಿಜೆಪಿ ಸರ್ಕಾರವು ಹತ್ತರಿಂದ ಹದಿನೈದು ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದೆ. ಆದರೆ, ರೈತರಿಗೆ ಕಾನೂನುಬದ್ಧವಾಗಿ ಎಂಎಸ್‌ಪಿ ಖಾತ್ರಿಯನ್ನು ಬಿಜೆಪಿ ನಿರಾಕರಿಸುತ್ತಿದೆ. ಅಲ್ಲದೇ, ರೈತರು ತಮ್ಮ ಉತ್ಪನ್ನಗಳಿಗೆ ಮತ್ತು ಕಠಿಣ ಪರಿಶ್ರಮಕ್ಕೆ ಎಂಎಸ್‌ಪಿ ಮತ್ತು ಸರಿಯಾದ ಬೆಲೆಯನ್ನು ಮಾತ್ರ ಕೇಳುತ್ತಿದ್ದಾರೆ. ಆದರೆ, ಬೆಳೆಗಳು ಕೊಯ್ಲಿಗೆ ಸಿದ್ಧವಾದಾಗ ಕೇಂದ್ರ ಸರ್ಕಾರವು ತನ್ನ ಆಮದು, ರಫ್ತು ನೀತಿಯನ್ನು ಬದಲಿಸಿ ಕೃಷಿ ಉತ್ಪನ್ನಗಳ ಬೆಲೆಗಳನ್ನು ಕುಗ್ಗಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ರಾಜಸ್ಥಾನದ ಮೂಲಕ ಮಧ್ಯಪ್ರವೇಶ ಪ್ರವೇಶಿಸಿದ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ದೊಡ್ಡ ಸಂಖ್ಯೆಯಲ್ಲಿ ಜನರು ಸಹ ಸೇರಿದ್ದರು. ಈ ವೇಳೆ, ಭಾರೀ ಮಳೆ ಸುರಿದು ಗೊಂದಲದ ವಾತಾವರಣ ಉಂಟಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಜನರು ತಲೆಯ ಮೇಲೆ ಕುರ್ಚಿಗಳನ್ನು ಹೊತ್ತುಕೊಂಡಿದ್ದು ಕಂಡುಬಂತು.
ಇದನ್ನೂ ಓದಿ:ಒಂದು ವಾರದ ಬಿಡುವಿನ ನಂತರ ಭಾರತ್ ಜೋಡೋ ನ್ಯಾಯ್ ಯಾತ್ರೆ ಶುರು: ಮಧ್ಯಪ್ರದೇಶಕ್ಕೆ ಪ್ರವೇಶ
ರಾಹುಲ್ ಯಾತ್ರೆಯಲ್ಲಿ ಪಾಲ್ಗೊಂಡ ಕಮಲನಾಥ್:ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, "ರಾಹುಲ್ ಗಾಂಧಿ ಅವರು ಯಾತ್ರೆಗೆ ಹೊರಟಿದ್ದಾರೆ. ಇದು ಮಧ್ಯಪ್ರದೇಶಕ್ಕೆ ಅವರ ಎರಡನೇ ಭೇಟಿಯಾಗಿದೆ. ಅವರು ಕೇವಲ ಪ್ರೀತಿ, ವಾತ್ಸಲ್ಯ ಮತ್ತು ಶಾಂತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಇಂದು ನಮ್ಮ ದೇಶದ ಸಂಸ್ಕೃತಿ.. ನಮ್ಮ ದೇಶದ ಸಂಸ್ಕೃತಿ ಎಂದರೆ ಬೆಸೆಯುವ ಸಂಸ್ಕೃತಿ. ರಾಹುಲ್ ಗಾಂಧಿ ಈ ಸಂದೇಶವನ್ನು ಎಲ್ಲರಿಗೂ ನೀಡುತ್ತಿದ್ದಾರೆ" ಎಂದು ಗುಣಗಾನ ಮಾಡಿದರು.
ಕಮಲ್ನಾಥ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಜೋರಾಗಿ ಹರಡಿತ್ತು. ಆದರೆ ಈ ಬಗ್ಗೆ ಕಮಲನಾಥ್ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಭಾರತ ಜೋಡೋ ನ್ಯಾಯಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಊಹಾಪೋಹಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.