ಕರ್ನಾಟಕ

karnataka

ETV Bharat / bharat

ಪ್ರತಿಪಕ್ಷಗಳು 'ಮುಜ್ರಾ' ಮಾಡುತ್ತಿವೆ ಎಂದ ಮೋದಿ: ಪ್ರಧಾನಿ ಹುದ್ದೆಯ ಘನತೆ ಕಡಿಮೆ ಮಾಡಿದ್ದಾರೆ ಅಂತಾ ಕಾಂಗ್ರೆಸ್​ ಎದಿರೇಟು - Modis Mujra Remark - MODIS MUJRA REMARK

ಅಲ್ಪಸಂಖ್ಯಾತರ ಮತದಾರರ ಓಲೈಕೆಗಾಗಿ ಪ್ರತಿಪಕ್ಷಗಳು, ಅಲ್ಪಸಂಖ್ಯಾತರ ಮುಂದೆ 'ಮುಜ್ರಾ' (ನೃತ್ಯ) ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್​ ತಿರುಗೇಟು ಕೊಟ್ಟಿದೆ.

PM MODI
ಪ್ರಧಾನಿ ಮೋದಿ (ETV Bharat)

By ETV Bharat Karnataka Team

Published : May 25, 2024, 11:05 PM IST

ನವದೆಹಲಿ: ಪ್ರತಿಪಕ್ಷಗಳು 'ಮುಜ್ರಾ' (ನೃತ್ಯ) ಮಾಡುತ್ತಿವೆ ಎಂದ ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿಯವರು ಸಾರ್ವಜನಿಕ ಭಾಷಣವು ಕೆಳಮಟ್ಟಕ್ಕೆ ಇಳಿರುವುದು ಮಾತ್ರವಲ್ಲದೇ, ಉನ್ನತ ಹುದ್ದೆಯ ಘನತೆಯನ್ನೂ ಕಡಿಮೆ ಮಾಡಿದೆ ಎಂದು ಟೀಕಿಸಿದೆ.

ಬಿಹಾರದಲ್ಲಿ ಶನಿವಾರ ಪ್ರಧಾನಿ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿಯನ್ನು ಗುರಿಯಾಗಿಸಿಕೊಂಡಿದ್ದರು. ಅಲ್ಪಸಂಖ್ಯಾತ ಮತದಾರರನ್ನು ಓಲೈಸಲು ಪ್ರತಿಪಕ್ಷಗಳು, ಅಲ್ಪಸಂಖ್ಯಾತರ ಮುಂದೆ 'ಮುಜ್ರಾ' (ನೃತ್ಯ) ಮಾಡುತ್ತಿವೆ ಎಂದು ಪ್ರಧಾನಿ ಆರೋಪಿಸಿದ್ದರು. ಇದೇ ವೇಳೆ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಕೋಟಾ ಪ್ರಯೋಜನಗಳನ್ನು ಪ್ರತಿಪಕ್ಷಗಳು ಕಿತ್ತುಕೊಳ್ಳಲು ಮತ್ತು ಅದನ್ನು ಅಲ್ಪಸಂಖ್ಯಾತರಿಗೆ ನೀಡಲು ನಾನು ಬಿಡುವುದಿಲ್ಲ ಎಂದೂ ಹೇಳಿದ್ದರು.

ಈ ಬಗ್ಗೆ 'ಈಟಿವಿ ಭಾರತ್'ಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಪ್ರತಿಕ್ರಿಯಿಸಿ, "ಪ್ರಧಾನಿಯುವರು ಅಸಂಸದೀಯ ಭಾಷೆಯ ಎಲ್ಲ ಮಿತಿಗಳನ್ನು ಮೀರಿದ್ದಾರೆ. ಅವರು ಬಳಸುವ ಪದಗಳ ಮಟ್ಟ ತೀರಾ ಕೆಳಮಟ್ಟದಲ್ಲಿದ್ದು, ತಮ್ಮ ಉನ್ನತ ಹುದ್ದೆಯ ಗೌರವವನ್ನೇ ಅವಮಾನಿಸಿದ್ದಾರೆ. ಚುನಾವಣೆಯಲ್ಲಿ ಸೋಲುವ ಭಯದಲ್ಲಿರುವ ಮೋದಿ ನಿಜ ಮುಖ ಬಯಲಾಗಿದೆ. ಅವರಂತಹ ವ್ಯಕ್ತಿ ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರವನ್ನು ಮುನ್ನಡೆಸಿದರೆ, ದ್ವೇಷ, ಹಿಂಸಾಚಾರ ಮತ್ತು ಅಸಂಸದೀಯ ವ್ಯವಸ್ಥೆಗೆ ದಾರಿ ಮಾಡಿಕೊಡಲಿದೆ. ಅಷ್ಟೇ ಅಲ್ಲ ಅವರ ಕೀಳು ಮಟ್ಟದ ಭಾಷೆ ಭವಿಷ್ಯದ ಪೀಳಿಗೆ ಏನನ್ನು ಕಲಿಸುತ್ತದೆ'' ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್‌ಗಢದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಚಂದನ್ ಯಾದವ್ ಮಾತನಾಡಿ, ''ನಾನು ಮೊದಲ ಬಾರಿಗೆ ರಾಜಕೀಯ ಭಾಷಣದಲ್ಲಿ 'ಮುಜ್ರಾ' ಪದವನ್ನು ಕೇಳಿದ್ದೇನೆ ಮತ್ತು ಅದು ನಿರ್ಗಮಿಸುವ ಪ್ರಧಾನಿಯಿಂದ ಬಂದಿರುವ ಪದವಾಗಿದೆ. ತಮ್ಮ ನಾಲಿಗೆಯಿಂದ ಹಾಗೂ ತಪ್ಪು ಕಾರ್ಯಗಳ ಮೂಲಕ ರಾಜಕೀಯ ವಾತಾವರಣವನ್ನು ಹೆಚ್ಚು ವಿಷಪೂರಿತಗೊಳಿಸಿದ ಮತ್ತು ಕಲುಷಿತಗೊಳಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಪ್ರಧಾನಿ ಮೋದಿ. ವೃದ್ಧಾಪ್ಯದಲ್ಲೂ ಸಭ್ಯತೆ, ಮೌಲ್ಯಗಳ ಬಗ್ಗೆ ಕಾಳಜಿ ಇಲ್ಲದ ವ್ಯಕ್ತಿಯಾಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ'' ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಪವನ್ ಖೇರಾ, ''ಪ್ರಧಾನಿಯವರ ಮುಜ್ರಾ'' ಹೇಳಿಕೆಯು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದರ ದ್ಯೋತಕವಾಗಿದೆ. ಮತ್ತು ಅವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ತೋರುತ್ತದೆ. ಬಿಸಿ ವಾತಾವರಣದಲ್ಲಿ ಪ್ರಚಾರ ಮಾಡುವುದರಿಂದ ಪ್ರಧಾನಿ ಮನಸ್ಸು ವಿಚಲಿತವಾಗಿದೆ ಎಂದು ತೋರುತ್ತದೆ. ಪ್ರಧಾನಿಯನ್ನು ಸರಿಯಾಗಿ ನಡೆಸಿಕೊಳ್ಳುವಂತೆ ನಾನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಒತ್ತಾಯಿಸುತ್ತೇನೆ. ಅಂತಹ ಪದಗಳ ಬಳಕೆ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಸರಿಹೊಂದುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ:ಗುಜರಾತ್​ನಲ್ಲಿ ಮಹಾ ದುರಂತ: ಗೇಮ್‌ ಝೋನ್‌ನಲ್ಲಿ ಅಗ್ನಿ ಅವಘಡ, ಸಾವಿನ ಸಂಖ್ಯೆ 25ಕ್ಕೆ ಏರಿಕೆ.. ಪ್ರಧಾನಿ ತೀವ್ರ ಸಂತಾಪ

ABOUT THE AUTHOR

...view details