ತಿರುವನಂತಪುರಂ(ಕೇರಳ): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ ಘೋಷಿಸಿದ್ದ ಬೆಂಬಲವನ್ನು ಕೇರಳ ಕಾಂಗ್ರೆಸ್ ಗುರುವಾರ ತಿರಸ್ಕರಿಸಿದೆ. ತನ್ನ ಯುಡಿಎಫ್ ಮೈತ್ರಿಕೂಟವನ್ನು ಬೆಂಬಲಿಸಲು ವೈಯಕ್ತಿಕವಾಗಿ ಮತದಾರರನ್ನು ಪಕ್ಷ ಸ್ವಾಗತಿಸಿದೆ.
ಇತ್ತೀಚೆಗೆ ಕೇಂದ್ರದಿಂದ ನಿಷೇಧಗೊಂಡ ಪಿಎಫ್‌ಐನ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ರಾಜಕೀಯ ಅಂಗವೇ ಈ ಎಸ್‌ಡಿಪಿಐ. ಅಂದರೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ. ಕಾಂಗ್ರೆಸ್‌ಗೆ ಎಸ್‌ಡಿಪಿಐ ಬೆಂಬಲ ಘೋಷಿಸಿದ್ದ ವಿಷಯ ಚರ್ಚೆಗೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಶ್ನೆ ಮಾಡಲು ಆರಂಭಿಸಿತ್ತು. ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಕಾಂಗ್ರೆಸ್ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎರಡೂ ರೀತಿಯ ಕೋಮುವಾದವನ್ನು ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.
''ನಾವು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ವಿರೋಧಿಸುತ್ತೇವೆ. ಇದೇ ಸಂದರ್ಭಗಳಲ್ಲಿ ಯುಡಿಎಫ್‌ಗೆ ಎಸ್‌ಡಿಪಿಐ ನೀಡುವ ಬೆಂಬಲವನ್ನು ಇದೇ ನಿಟ್ಟಿನಲ್ಲಿ ವೀಕ್ಷಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಇಚ್ಛೆಗೆ ಅನುಗುಣವಾಗಿ ಮತ ಚಲಾಯಿಸಬಹುದು. ಎಲ್ಲರೂ ಯುಡಿಎಫ್‌ಗೆ ಮತ ಹಾಕಬೇಕೆಂದು ನಾವು ಬಯಸುತ್ತೇವೆ. ಆದರೆ, ಸಂಘಟನೆಗಳ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ'' ಎಂದು ಸತೀಶನ್ ಹೇಳಿದರು. ಇದೇ ವೇಳೆ, ಮತ್ತಷ್ಟು ವಿವರಣೆ ನೀಡಲು ಅವರು ನಿರಾಕರಿಸಿದರು.