ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಗೆ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ಸೇರಿದಂತೆ 40 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಗುರುವಾರ ಅಂತಿಮಗೊಳಿಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 60 ಲೋಕಸಭಾ ಸ್ಥಾನಗಳ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ. ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್‌ಗಢ, ತೆಲಂಗಾಣ, ಸಿಕ್ಕಿಂ, ತ್ರಿಪುರ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ ಮತ್ತು ಲಕ್ಷದ್ವೀಪದ ಲೋಕಸಭೆ ಸ್ಥಾನಗಳ ಕುರಿತು ಚರ್ಚೆ ನಡೆದಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, ''ಕೇರಳದಲ್ಲಿ ಕಾಂಗ್ರೆಸ್ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಮಿತ್ರಪಕ್ಷಗಳು ಕಣಕ್ಕಿಳಿಯಲಿವೆ. 16 ಸ್ಥಾನಗಳಲ್ಲಿ ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಸಿಇಸಿ ನಿರ್ಧಾರ ಕೈಗೊಂಡಿದೆ. ಶುಕ್ರವಾರ ಎಐಸಿಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದೆ'' ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ವಯನಾಡ್ನಿಂದ ಸ್ಪರ್ಧೆ?:ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಬಯಸಲಿದ್ದಾರೆ. ಎಐಸಿಸಿ ಉಸ್ತುವಾರಿ ದೆಹಲಿ ದೀಪಕ್ ಬಬಾರಿಯಾ ಅವರು, ''ದೆಹಲಿ ಅಭ್ಯರ್ಥಿಗಳ ಬಗ್ಗೆ ಪ್ರಾಥಮಿಕ ಚರ್ಚೆಯಾಗಿದೆ. ಅಲ್ಲಿ ಪಕ್ಷವು ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇಂಡಿಯಾ ಬ್ಲಾಕ್ ಮಿತ್ರ ಪಕ್ಷ ಎಎಪಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮಾರ್ಚ್ 11ರಂದು ದೆಹಲಿ ಸ್ಥಾನಗಳ ಕುರಿತು ಮತ್ತೆ ಚರ್ಚೆ ನಡೆಯಲಿದೆ" ಎಂದು ತಿಳಿಸಿದರು.
ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಾಜನಂದಗಾಂವ್‌ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ತಾಮ್ರಧ್ವಜ್ ಸಾಹು ಅವರು ರಾಜ್ಯದ ಮಹಾಸಮುಂಡ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಕೂಡ ಅಂತಿಮಗೊಂಡ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.