ಕೊಲ್ಹಾಪುರ(ಮಹಾರಾಷ್ಟ್ರ):ಕರ್ನಾಟಕದ ಸಿಎಂ ಹುದ್ದೆಯನ್ನು ಅಲ್ಲಿನ ಡಿಸಿಎಂಗೆ ನೀಡಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಈಗಿರುವ ಮುಖ್ಯಮಂತ್ರಿಗಳು 2.5 ವರ್ಷಗಳ ಬಳಿಕ ಬದಲಾಗಲಿದ್ದಾರೆ. ರಾಜ್ಯಕ್ಕೆ ಮತ್ತೊಬ್ಬ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮುಖ್ಯಮಂತ್ರಿ, ಪ್ರಧಾನಿಗಳನ್ನು ಬದಲಿಸುವುದು ಕಾಂಗ್ರೆಸ್ನ ಕೆಲಸವಾಗಿದೆ. ಹಾಗೊಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ I.N.D.I.A ಕೂಟ ಅಧಿಕಾರಕ್ಕೆ ಬಂದರೆ, ವರ್ಷಕ್ಕೊಬ್ಬರು ಪ್ರಧಾನಿಯಾಗಲಿದ್ದಾರೆ. ಮೈತ್ರಿಯಲ್ಲಿ ಈವರೆಗೂ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ನಿರ್ಣಯವಾಗಿಲ್ಲ. ಇದರಿಂದ ದೇಶ ಅಸ್ಥಿರತೆಗೆ ಕಾರಣವಾಗಲಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಇಂಡಿಯಾ ಕೂಟದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಇಂಡಿಯಾ ಬಣ ಅಧಿಕಾರಕ್ಕೆ ಬಂದಲ್ಲಿ "ಒಂದು ವರ್ಷ, ಒಂದು ಪ್ರಧಾನಿ" ಸೂತ್ರವನ್ನು ರೂಪಿಸಲಿದೆ. ಅಂದರೆ ಐದು ವರ್ಷಗಳಲ್ಲಿ ದೇಶ ಐವರು ಪ್ರಧಾನ ಮಂತ್ರಿಗಳನ್ನು ನೋಡಲಿದೆ. ವಿರೋಧ ಪಕ್ಷಗಳು ಬಹುಮತಕ್ಕೆ ಬೇಕಾದ ಸೀಟುಗಳನ್ನು ಗೆಲ್ಲಲು ಅಲ್ಲ, ಅದರ ಸಮೀಪವೂ ಸುಳಿಯಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಸಿಎಂ ಬದಲು:2.5 ವರ್ಷಗಳ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಉಪ ಮುಖ್ಯಮಂತ್ರಿಗೆ ಹಸ್ತಾಂತರಿಸಲು ಕಾಂಗ್ರೆಸ್ ಯೋಜಿಸಿದೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಇದನ್ನು ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಈಗ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರ ಶುರುವಾಗಿದೆ ಎಂದರು.
ಸಂವಿಧಾನದತ್ತವಾಗಿ ದಲಿತರು ಮತ್ತು ಹಿಂದುಗಳಿ ವರ್ಗಗಳಿಗೆ ಇರುವ ಮೀಸಲಾತಿಯನ್ನು ಕಾಂಗ್ರೆಸ್ ಬದಲಿಸುಲು ಮುಂದಾಗಿದೆ. ಕರ್ನಾಟಕದಲ್ಲಿ ಮುಸ್ಲಿಮರಿಗೆ ವಿಶೇಷ ಕೋಟಾ ನೀಡಲಾಗಿದೆ. ಮುಂದೆ ಅದು ಒಬಿಸಿಗಳಿಗೆ ಇರುವ ಶೇಕಡಾ 27 ರಷ್ಟು ಕೋಟಾದಲ್ಲಿ ಸೇರಿಸಲಿದೆ. ಇಡೀ ದೇಶದಲ್ಲಿ ಇದನ್ನು ವಿಸ್ತರಿಸಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಮೋದಿ ಆರೋಪಿಸಿದರು.