ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಒಂದೆಡೆಯಾದರೆ, ವೈಟ್ ಟ್ಯಾಪಿಂಗ್, ಭೂಮಿಯಡಿ ಕೇಬಲ್ ಅಳವಡಿಕೆ ಸೇರಿದಂತೆ ಇತರ ಕಾರ್ಯಗಳಿಗಾಗಿ ರಸ್ತೆ ಅಗೆಯುತ್ತಿರುವುದು ಜನಸಾಮಾನ್ಯರಿಗೆ ತೀವ್ರ ಸಮಸ್ಯೆ ಉಂಟುಮಾಡುತ್ತಿದೆ. ನಗರದಲ್ಲೆಲ್ಲೂ ರಸ್ತೆ ಗುಂಡಿಗಳು ಇರಬಾರದು, ಯಾರಿಗೂ ಅಪಾಯ ಆಗಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಕಷ್ಟು ಗಡುವು ನೀಡಿದ್ದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಕಂಡು ಬರುತ್ತಿದೆ.
ಅನೇಕ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳನ್ನು ತೋಡಿಟ್ಟು ಕಾಮಗಾರಿಯನ್ನು ಬೇಗ ಮುಕ್ತಾಯಗೊಳಿಸುತ್ತಿಲ್ಲ. ಇದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ, ನಗರದ ಪ್ರಮುಖ ರಸ್ತೆಗಳಾದ ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ರೇಸ್‌ಕೋರ್ಸ್ ರಸ್ತೆ ಹಾಗೂ ಕುಮಾರ ಕೃಪಾ ರಸ್ತೆಗಳ ಸುತ್ತಮುತ್ತ ತರಹೇವಾರಿ ಸಮಸ್ಯೆಗಳು ಉದ್ಭವಿಸಿವೆ.
ರೇಸ್‌ಕೋರ್ಸ್ ರಸ್ತೆ, ರಾಜಾಜಿನಗರ, ವಿಜಯನಗರ, ಗೋವಿಂದರಾಜನಗರ, ಹೊಸಹಳ್ಳಿ, ಮೆಜೆಸ್ಟಿಕ್, ಮಲ್ಲೇಶ್ವರ ಸೇರಿ ಹಲವೆಡೆ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೊಳ್ಳಲು ಬಿಬಿಎಂಪಿ ಎಲ್ಲ ತಯಾರಿ ಮಾಡಿಕೊಂಡಿದೆ. ಅದಕ್ಕಾಗಿ ಈ ರಸ್ತೆಯ ಒಳಭಾಗದಲ್ಲಿ ಹಾದು ಹೋಗಿರುವ ಹಲವು ಪೈಪ್‌ಗಳು, ವಿವಿಧ ತರಹದ ವೈರ್‌ಗಳನ್ನು ಸೇರಿಸಿ ಒಂದೇ ಮಾರ್ಗದಲ್ಲಿ ತರಲು ಉದ್ದೇಶಿಸಲಾಗಿದೆ. ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುವ ಮೊದಲೇ ಈ ಕೆಲಸಗಳನ್ನು ಮಾಡಲು ಬೆಸ್ಕಾಂ ಗುಂಡಿ ತೋಡಿತ್ತು. ಈ ಗುಂಡಿತೋಡುವ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸವಾರರು ಪರದಾಡುತ್ತಿದ್ದಾರೆ.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ರಸ್ತೆ, ವಿಜಯನಗರ, ರಾಜರಾಜೇಶ್ವರಿ ನಗರ, ಜೆ.ಪಿ.ನಗರ 6ನೇ ಹಂತ, ಜಯನಗರ, ಮಲ್ಲೇಶ್ವರ, ದೀಪಾಂಜಲಿ ನಗರ, ಅತ್ತಿಗುಪ್ಪೆ, ಚಿಕ್ಕಪೇಟೆ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ರಸ್ತೆಗಳು ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳ ಕಾರುಬಾರು ಹೆಚ್ಚಾಗಿದೆ. ಗುಂಡಿ ತೆಗೆದು ಎಂಟರಿಂದ ಒಂಭತ್ತು ತಿಂಗಳಾದರೂ ಮುಗಿಯದ ಕಾಮಗಾರಿಗೆ ಜನ ಛೀಮಾರಿ ಹಾಕುತ್ತಿದ್ದಾರೆ. ಈ ಕುರಿತು ಪಾಲಿಗೆ ಶೀಘ್ರದಲ್ಲಿ ಕಾಮಗಾರಿ ಕೆಲಸ ಮುಗಿಸುವಂತೆ ಜನರು ಪತ್ರಗಳನ್ನು ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲದ ಕಾರಣ ಬಿಬಿಎಂಪಿಗೆ ದೂರುತ್ತಿದ್ದಾರೆ. ಶಾಲಾ-ಕಾಲೇಜು ಮಕ್ಕಳು, ವಯಸ್ಸಾದ ವೃದ್ದರು ಈ ಸ್ಥಳಗಳಲ್ಲಿ ಓಡಾಡಲು ಕಷ್ಟವಾಗುತ್ತಿದ್ದು, ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳದೆ ರಸ್ತೆಯಲ್ಲಿ ಮಣ್ಣನ್ನು ಅಗೆದು ಹಾಗೆ ಬಿಟ್ಟಿರುವುದು ಜನರನ್ನು ಮತ್ತಷ್ಟು ಕೆರಳಿಸಿದೆ.
"ಗುಂಡಿ ತೋಡಿಟ್ಟಿರುವ ಮಣ್ಣನ್ನು ರಸ್ತೆ ಪಕ್ಕದಲ್ಲಿಯೇ ಹಾಕಲಾಗಿದೆ. ಚಂಡಮಾರುತ ಮಳೆಯಾಗುತ್ತಿರುವ ಪರಿಣಾಮ ಮಣ್ಣು ಕುಸಿದು ರಸ್ತೆಗೆ ಹರಿದು ಬರುತ್ತಿದ್ದು ವಾಹನ ಸವಾರರು, ಪಾದಚಾರಿಗಳು ಸ್ಥಳೀಯ ನಿವಾಸಿಗಳಿಗೂ ಇದರಿಂದ ಹಲವು ಸಮಸ್ಯೆಯಾಗುತ್ತಿವೆ. ಹೀಗೆ ಅರ್ಧಕ್ಕೆ ಬಿಟ್ಟಿರುವ ಕಾಮಗಾರಿಯನ್ನು ಸಂಬಂಧಪಟ್ಟವರು ಶೀಘ್ರದಲ್ಲಿ ಪೂರ್ಣಗೊಳಿಸಬೇಕು" ಎಂದು ಬೈಕ್ ಸವಾರ ಪೂರ್ಣೇಶ್ ಹೇಳಿದ್ದಾರೆ.
ಇದನ್ನೂ ಓದಿ: ರಾಜಧಾನಿಯ ರಸ್ತೆಗುಂಡಿ ಮುಚ್ಚಲು 694 ಕೋಟಿ ರೂ. ಟೆಂಡರ್ ಕರೆಯಲು ಮುಂದಾದ ಪಾಲಿಕೆ - BBMP TENDER