ಮಲಪ್ಪುರಂ (ಕೇರಳ): ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಭಾರಿ ಅಂತರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಕೇರಳ ಜಿಲ್ಲೆಯಲ್ಲಿ ಬುಧವಾರ ರೋಡ್ ಶೋ ನಡೆಸಿದರು.
ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿ ಕೇರಳ ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ವಯನಾಡು ಲೋಕಸಭಾ ಕ್ಷೇತ್ರದ ಭಾಗವಾಗಿರುವ ಎಡವನ್ನಾದಲ್ಲಿ ರೋಡ್ ಶೋ ನಡೆಸಿದರು. ಶೋ ನಡೆದ ಮಾರ್ಗದುದ್ದಕ್ಕೂ ಸಾವಿರಾರು ಯುಡಿಎಫ್ ಕಾರ್ಯಕರ್ತರು ಮತ್ತು ಬೆಂಬಲಿಗರು ಜಮಾಯಿಸಿದ್ದರು. ಇದಕ್ಕೂ ಮುನ್ನ ಅವರಿಗೆ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ರಾಯ್ ಬರೇಲಿ ಮತ್ತು ವಯನಾಡಿನಲ್ಲೂ ರಾಹುಲ್ಗೆ ಭಾರಿ ಗೆಲುವು:ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಕೇರಳದ ವಯನಾಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರಿ ಅಂತರದಿಂದ ಗೆಲವು ಪತಾಕೆ ಹಾರಿಸಿದ್ದರು. ರಾಯ್‌ಬರೇಲಿಯಲ್ಲಿ ಸುಮಾರು 390030 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಮಣಿಸಿದ್ದರು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಹುಲ್ ಗಾಂಧಿ 6,87,649 ಮತಗಳನ್ನು ಗಳಿಸಿದ್ದರು. ಪ್ರತಿಸ್ಪರ್ಧಿ ದಿನೇಶ್ ಪ್ರತಾಪ್ ಸಿಂಗ್ 2,96,703 ಮತಗಳನ್ನು ಪಡೆದುಕೊಂಡಿದ್ದರು.