ಛಿಂದ್ವಾರ (ಮಧ್ಯಪ್ರದೇಶ):ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಕಮಲ್ನಾಥ್ ಬಿಜೆಪಿ ಸೇರುತ್ತಾರೆ ಎಂಬ ವದಂತಿಗೆ ಖುದ್ದು ಅವರೇ ಇತಿಶ್ರೀ ಹಾಡಿದ್ದಾರೆ. ಇದರ ಬೆನ್ನಲ್ಲೇ, 'ಜನರು ಬಯಸಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದಲು ಸಿದ್ಧ' ಎಂದು ಹೇಳುವ ಮೂಲಕ ನಿವೃತ್ತಿಯ ಮಾತನ್ನಾಡಿದ್ದಾರೆ.
ತಮ್ಮ ಮತ್ತು ಕಾಂಗ್ರೆಸ್ನ ಭದ್ರಕೋಟೆಯಾದ ಛಿಂದ್ವಾರಾ ಜಿಲ್ಲೆಯ ಚೌರೈ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು (ಸಾರ್ವಜನಿಕರು) ನನಗೆ ಇಷ್ಟು ವರ್ಷಗಳ ಕಾಲ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸಿದ್ದೀರಿ. ನಾನು ರಾಜಕೀಯದಿಂದ ವಿದಾಯ ಹೇಳಬೇಕು ಎಂದು ಬಯಸಿದರೆ, ಅದುವೇ ನಿಮ್ಮ ಆಯ್ಕೆಯಾಗಿದ್ದರೆ, ನಾನು ಪೂರ್ಣವಿರಾಮ ಹಾಕಲು ಸಿದ್ಧನಿದ್ದೇನೆ. ನಾನು ಯಾವುದೇ ಒತ್ತಾಯಪೂರ್ವಕವಾಗಿ ಇಲ್ಲಿ ಮುಂದುವರಿಯಲು ಬಯಸುವುದಿಲ್ಲ. ಎಲ್ಲವನ್ನೂ ಜನರ ನಿರ್ಧಾರಕ್ಕೆ ಬಿಡುತ್ತೇನೆ ಎಂದು ಹೇಳಿದರು.
ನಮ್ಮ ರಾಜಕೀಯವನ್ನು ಅಂತಿಮವಾಗಿ ಜನರೇ ನಿರ್ಧರಿಸಬೇಕು. ಹೀಗಾಗಿ ನಾನು ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ಇರಬೇಕೆ ಬೇಡವೇ ಎಂಬುದನ್ನು ಅವರ (ಜನರ) ನಿರ್ಧಾರಕ್ಕೆ ಬಿಡುತ್ತಿದ್ದೇನೆ. ಉಳಿದೆಲ್ಲವನ್ನೂ ಜನರೇ ನಿರ್ಧರಿಸಲಿ ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಟೀಕೆ:ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು. ರಾಮಮಂದಿರವನ್ನು ಆ ಪಕ್ಷ ಗುತ್ತಿಗೆ ಪಡೆದಿದಿಯೇ?. ಅದು ಸಾರ್ವಜನಿಕ ಹಣದಿಂದ ಕಟ್ಟಿದ ಭವ್ಯ ಮಂದಿರ. ರಾಮನನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.