ಮುಂಬೈ: ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 'ಗ್ಯಾರಂಟಿ ಕಾರ್ಡ್' ಹೊರತರುವ ಕಾಂಗ್ರೆಸ್ ಯೋಜನೆಯನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ವ್ಯಂಗ್ಯವಾಡಿದ್ದು, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ನ ಈ ತಂತ್ರ ವಿಫಲವಾಗಿತ್ತು ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಚುನಾವಣಾ ಭರವಸೆಗಳನ್ನು ಒಳಗೊಂಡ 'ಗ್ಯಾರಂಟಿ ಕಾರ್ಡ್' ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತಿಳಿಸಿದ ಬೆನ್ನಲ್ಲೇ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ.
"ರಾಹುಲ್ ಗಾಂಧಿ ಅವರ ಗ್ಯಾರಂಟಿ ಕಾರ್ಡ್ ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ಗೆ ಸಹಾಯ ಮಾಡಲಿಲ್ಲ" ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದರು. "ಕಾಂಗ್ರೆಸ್ ತಾನು ಭರವಸೆ ನೀಡಿದಂತೆ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಗ್ಯಾರಂಟಿ ಕಾರ್ಡ್ ಏಕೆ ಜಾರಿಗೆ ತರುತ್ತಿಲ್ಲ ಎಂಬುದನ್ನು ಅದು ವಿವರಿಸಬೇಕು. ಅದು ಮಹಾರಾಷ್ಟ್ರದಲ್ಲಿಯೂ ವಿಫಲವಾಗಲಿದೆ" ಎಂದು ಅವರು ನುಡಿದರು.
ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ ಬಂಡಾಯ ಅಭ್ಯರ್ಥಿಗಳ ಸಮಸ್ಯೆಯನ್ನು ಎದುರಿಸಲು ಆಡಳಿತಾರೂಢ ಬಿಜೆಪಿ-ಶಿವಸೇನೆ-ಎನ್ಸಿಪಿ 'ಮಹಾಯುತಿ' ಮೈತ್ರಿಕೂಟದ ಕಾರ್ಯತಂತ್ರದ ಬಗ್ಗೆ ಮಾತನಾಡಿದ ಫಡ್ನವೀಸ್, ಎನ್ ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸೇರಿದಂತೆ ಮೈತ್ರಿ ನಾಯಕರು ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸದಲ್ಲಿ ಸಭೆ ನಡೆಸಿದರು ಎಂದು ಹೇಳಿದರು.