ಮುಂಬೈ:ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಸಂಜಯ್ ನಿರುಪಮ್ ಅವರು ಕಾಂಗ್ರೆಸ್ನಿಂದ ಉಚ್ಚಾಟನೆಯಾಗಿದ್ದಾರೆ. ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಿರುವ ಅವರನ್ನು 6 ವರ್ಷಗಳ ಕಾಲ ಹೊರಹಾಕಲಾಗಿದೆ.
ಶಿಸ್ತು ಕ್ರಮ ಕೈಗೊಂಡ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದಿನಿಂದ (ಗುರುವಾರ) ಜಾರಿಗೆ ಬರುವಂತೆ ಮಹಾರಾಷ್ಟ್ರದ ಸಂಜಯ್ ನಿರುಪಮ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಪಕ್ಷದ ವಿರುದ್ಧದ ನಡೆ ಹಿನ್ನೆಲೆಯಲ್ಲಿ ಅವರನ್ನು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ವಜಾ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸ್ಟಾರ್ ಪ್ರಚಾರಕ ಪಟ್ಟಿಯಿಂದ ಔಟ್:ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಉಚ್ಚಾಟಿತರಾದ ಸಂಜಯ್ ನಿರುಪಮ್ ಕೂಡ ಒಬ್ಬರಾಗಿದ್ದರು. ಅವರನ್ನು ಪ್ರಚಾರಕರಾಗಿ ಗುರುತಿಸಿದ್ದರೂ, ಪಕ್ಷದ ವಿರುದ್ಧವೇ ಹೇಳಿಕೆ ನೀಡಿ ಮುಜುಗರಕ್ಕೀಡು ಮಾಡಿದ್ದರು. ಇದರಿಂದ ಸಂಜಯ್ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಮೈತ್ರಿ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಶಿವಸೇನೆಯ ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ನೀಡಿದ್ದರು. ಇದು ಪಕ್ಷದಲ್ಲಿ ಇಬ್ಬಂದಿತನ ಉಂಟು ಮಾಡಿತ್ತು. ಕ್ರಮದ ಎಚ್ಚರಿಕೆ ನೀಡಿದರೂ ಸಂಜಯ್ ಅವರು ತಮ್ಮ ನಿಲುವು ಬದಲಿಸಿರಲಿಲ್ಲ. ಇದರಿಂದ ಅವರನ್ನು ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟು, ಈಗ ಪಕ್ಷದಿಂದಲೇ ಹೊರದಬ್ಬಲಾಗಿದೆ.
ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಸಂಜಯ್:ಉಚ್ಚಾಟನೆ ಹೊರಬಿದ್ದ ತಕ್ಷಣ ತಾವೇ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಸಂಸದರು ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರಾಧ್ಯಕ್ಷರಿಗೆ ರವಾನಿಸಿದ್ದು, ಅವರು ಅಂಗೀಕರಿಸಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಪತ್ರ ಸಮೇತ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನ ಮೇಲೆ ಹೆಚ್ಚು ಶಕ್ತಿ ಹಾಳು ಮಾಡಬಾರದು. ಬದಲಾಗಿ ಪಕ್ಷ ಉಳಿಸಲು ಬಳಸಿಕೊಳ್ಳಬೇಕು. ಪಕ್ಷವು ಗಂಭೀರ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ನಾನು ಕೊಟ್ಟ ಒಂದು ವಾರದ ಅವಧಿ ಇಂದಿಗೆ ಮುಗಿದಿದೆ. ನಾಳೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅದರಲ್ಲಿ ಹೇಳಿದ್ದರು. ಉಚ್ಚಾಟಿತ ಮಾಜಿ ಸಂಸದ ಸಂಜಯ್ ನಿರುಪಮ್, ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿದ್ದರು. ಆದರೆ, ಮೈತ್ರಿ ಧರ್ಮದಿಂದಾಗಿ ಆ ಕ್ಷೇತ್ರ ಉದ್ಧವ್ ಠಾಕ್ರೆ ಬಣದ ಪಾಲಾಗಿದೆ. ಇದರ ವಿರುದ್ಧ ಸಿಡಿದೆದ್ದ ಅವರು, ಉದ್ಧವ್ ವಿರುದ್ಧ ನಿಂದಿಸಿದ್ದರು. ಕಾಂಗ್ರೆಸ್ ನಾಶ ಮಾಡಲು ಶಿವಸೇನೆ ಮುಂದಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ಬಿಜೆಪಿ ರೆಬೆಲ್ ಈಶ್ವರಪ್ಪ - ಅಮಿತ್ ಶಾ ನಡುವೆ ನಡೆಯದ ಭೇಟಿ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತವೆಂದ ಈಶ್ವರಪ್ಪ - K S Eshwarappa