ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 43 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಹೊಸ ಪಟ್ಟಿಯಲ್ಲಿ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಪುತ್ರ ನಕುಲ್ ನಾಥ್, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಸೇರಿ ಹಲವರಿಗೆ ಟಿಕೆಟ್ ಘೋಷಿಸಲಾಗಿದೆ.
ಮಾರ್ಚ್ 8ರಂದು ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಲಾಗಿತ್ತು. ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತಷ್ಟು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ಅಸ್ಸೋಂನ 12 ಕ್ಷೇತ್ರ, ಮಧ್ಯಪ್ರದೇಶದ 10 ಕ್ಷೇತ್ರ, ಗುಜರಾತ್‌ನ 7 ಕ್ಷೇತ್ರ, ರಾಜಸ್ಥಾನದ 10 ಕ್ಷೇತ್ರ, ಉತ್ತರಾಖಂಡದ 3 ಕ್ಷೇತ್ರ, ದಮನ್ ಮತ್ತು ದಿಯು ಲೋಕಸಭೆ ಕ್ಷೇತ್ರ ಸೇರಿ 43 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ 10 ಸಾಮಾನ್ಯ ಅಭ್ಯರ್ಥಿಗಳು, 13 ಹಿಂದುಳಿದ ವರ್ಗದ ಅಭ್ಯರ್ಥಿಗಳು, 10 ಎಸ್‌ಸಿ ಅಭ್ಯರ್ಥಿಗಳು, 9 ಎಸ್‌ಟಿ ಅಭ್ಯರ್ಥಿಗಳು ಮತ್ತು ಓರ್ವ ಮುಸ್ಲಿಂ ಅಭ್ಯರ್ಥಿ ಸೇರಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರನ್ನು ಛಿಂದ್ವಾರಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಉಳಿದಂತೆ ಫೂಲ್ ಸಿಂಗ್ ಬರಯ್ಯ (ಭಿಂಡ್), ಪಂಕಜ್ ಅಹಿರ್ವಾರ್ (ಟಿಕಮ್‌ಗಢ), ಸಿದ್ಧಾರ್ಥ್ ಕುಶ್ವಾಹ (ಸತ್ನಾ), ಕಮಲೇಶ್ವರ್ ಪಟೇಲ್ (ಸಿಧಿ), ಓಂಕಾರ್ ಸಿಂಗ್ ಮಾರ್ಕಮ್ (ಮಂಡ್ಲಾ), ರಾಜೇಂದ್ರ ಮಾಳವಿಯಾ (ದೇವಾಸ್), ರಾಧೇಶ್ಯಾಮ್ ಮುವೆಲ್ (ಧಾರ್), ಪೊರ್ಲಾಲ್ ಖಾರ್ಟೆ (ಖಾರ್ಗೋನ್), ರಾಮು ಟೇಕಮ್ (ಬೆತುಲ್) ಅವರಿಗೆ ಟಿಕೆಟ್ ನೀಡಲಾಗಿದೆ.