ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಪ್ಯಾರಿ ದೀದಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ನೀಡಲಾಗುವುದು ಎಂದು ಸೋಮವಾರ ದೆಹಲಿ ಕಾಂಗ್ರೆಸ್ ಘೋಷಿಸಿದೆ. ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಅವರು ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಯೋಜನೆ ಘೋಷಣೆ ಮಾಡಿದರು.
ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, "ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ನಮ್ಮ ಪಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ಸರ್ಕಾರ ರಚನೆಯಾದ ನಂತರ ಆ ಭರವಸೆಯನ್ನು ಈಡೇರಿಸಿದ್ದೇವೆ. ಈಗ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ ಜೊತೆಗೆ ಚುನಾವಣೆಗೂ ಮುನ್ನ ಭರವಸೆ ನೀಡಿದ್ದ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕೆಲಸವನ್ನೂ ನಮ್ಮ ಸರ್ಕಾರ ಮಾಡಿದೆ" ಎಂದರು.
ನಮ್ಮ ಸರ್ಕಾರಗಳು ಭರವಸೆಗಳನ್ನು ಈಡೇರಿಸಿವೆ:ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಮಾತನಾಡಿ,"ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಸೇರಿದಂತೆ ನಮ್ಮ ಸರ್ಕಾರ ಎಲ್ಲೆಲ್ಲಿ ಅಧಿಕಾರದಲ್ಲಿದ್ದೇವೆಯೋ ಅಲ್ಲಿ ಚುನಾವಣೆಗೂ ಮೊದಲು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವಿದೆ, ಅದು ವೇಷಧಾರಿ ಮತ್ತು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತದೆ. ಅವರ ಮಾತಿಗೆ ಮರುಳಾಗಬೇಡಿ ಎಂದು ನಾವು ಜನರಿಗೆ ಮನವಿ ಮಾಡುತ್ತೇವೆ.