ಜೈಪುರ : ಬಿಜೆಪಿ ಸಚಿವರ ಹೇಳಿಕೆ ಹಾಗೂ ಕಾಂಗ್ರೆಸ್ನ ಆರು ಶಾಸಕರನ್ನು ಅಮಾನತು ಮಾಡಿದ ಕ್ರಮ ಖಂಡಿಸಿ ರಾಜಸ್ಥಾನ ಕಾಂಗ್ರೆಸ್ ಕಾರ್ಯಕರ್ತರು ಜೈಪುರದ ವಿಧಾನಸಭೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಬಿಜೆಪಿ ಸಚಿವ ಅವಿನಾಶ್ ಗೆಹ್ಲೋಟ್ ಹೇಳಿಕೆ ಖಂಡಿಸಿ ಮತ್ತು ಕಾಂಗ್ರೆಸ್ ಶಾಸಕರ ಅಮಾನತಿನ ಕ್ರಮ ವಿರೋಧಿಸಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಸದನದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದರು.
ಇಂದು ವಿಧಾನಸಭೆ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅವರ ಸದನ ಪ್ರವೇಶ ತಡೆಯಲು ವಿಧಾನಸಭೆ ಮುಂದೆ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ.
ಸಂಸದ ಹರೀಶ್ ಮೀನಾ ಮತ್ತು ಮುರಾರಿ ಮೀನಾ, ಮಾಜಿ ಸಚಿವ ಬಿಡಿ ಕಲ್ಲಾ ಹಾಗೂ ಇತರೆ ಪ್ರಮುಖ ಹಿರಿಯ ಸಚಿವರು ಕೂಡ ಸದನದೆದುರು ನಡೆಸಲಾಗುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿರುವ ರಾಜಸ್ಥಾನ ವಿಪಕ್ಷ ನಾಯಕ ಟಿಕರಾಮ್ ಜುಲ್ಲೈ, ರಾಜ್ಯ ಸರ್ಕಾರವು ವಿಪಕ್ಷಕ್ಕೆ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಸಚಿವರುಗಳು ಗೊಂದಲ ಸೃಷ್ಟಿಸುತ್ತಿದ್ದು, ಅದು ನಿವಾರಣೆಯಾಗಿಲ್ಲ. ಆಡಳಿತ ಪಕ್ಷದ ನಾಯಕರು ಅವರ ತಪ್ಪು ಮರೆಮಾಚಲು ಇಂದಿರಾಗಾಂಧಿ ಹೆಸರನ್ನು ಬಳಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ತಮ್ಮ ಪಕ್ಷದ ಸಚಿವರ ಹೇಳಿಕೆ ಸಮರ್ಥಿಸಿಕೊಂಡು ಮಾತನಾಡಿರುವ ಉಪ ಮುಖ್ಯಮಂತ್ರಿ ಪ್ರೇಮ್ಚಂದ್ ಬೈರ್ವಾ, ನಮ್ಮ ಸಚಿವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲಿನ ಗೌರವದಿಂದ ಅಜ್ಜಿ ಎಂದು ಕರೆದಿದ್ದಾರೆ. ಆದರೆ, ವಿಪಕ್ಷ ಸದಸ್ಯರು ಇದನ್ನು ತಪ್ಪಾಗಿ ಭಾವಿಸಿದ್ದಾರೆ. ಈ ವೇಳೆ ಉಂಟಾದ ಗದ್ದಲದಲ್ಲಿ ಸ್ಪೀಕರ್ ಅವರನ್ನು ಸದನದಿಂದ ಹೊರ ಹಳುಹಿಸಿದ್ದಾರೆ. ಇದಾದ ಬಳಿಕ ವಿಪಕ್ಷ ಇದನ್ನು ಆಲಿಸದೇ ದಾಳಿ ಮುಂದುವರೆಸಿದ್ದು, ಇದು ಖಂಡನೀಯ ಎಂದಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಗೆಹ್ಲೋಟ್ 2023 - 24ರ ಬಜೆಟ್ನತ್ತ ಕೂಡ ಬೊಟ್ಟು ಮಾಡಿದ್ದು, ನಿಮ್ಮ ಅಜ್ಜಿ ಇಂದಿರಾ ಗಾಂಧಿ ಹೆಸರನ್ನೇ ಎಲ್ಲಾ ಯೋಜನೆಗಳಿಗೆ ಇಡುತ್ತೀರಾ ಎಂದು ಪ್ರಶ್ನಿಸಿದ್ದರು. ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿಯೇ ಕಲಾಪವನ್ನು ಮೂರು ಬಾರಿ ಮುಂದೂಡಿದರು. ಗದ್ದಲ ನಿಲ್ಲದೇ ಇರುವುದರಿಂದ ಹಾಗೂ ಸದನದ ಕಲಾಪ ಅಸ್ತವ್ಯಸ್ಥಗೊಳಿಸಿದ್ದಾರೆ ಎಂದು ಸ್ವೀಕರ್ ಕಾಂಗ್ರೆಸ್ ನ ಆರು ಜನ ಶಾಸಕರನ್ನು ಅಮಾನತಿನಲ್ಲಿಟ್ಟಿರುವುದಾಗಿ ಘೋಷಿಸಿದರು. ಮತ್ತೊಂದೆಡೆ ಸಚಿವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಇದನ್ನೂ ಓದಿ: ಸಚಿವರ ’ಅಜ್ಜಿ‘ ಹೇಳಿಕೆ ತಂದ ಕೋಲಾಹಲ; ರಾಜಸ್ಥಾನ ಕಾಂಗ್ರೆಸ್ ಶಾಸಕರಿಂದ ಅಹೋರಾತ್ರಿ ಧರಣಿ
ಇದನ್ನೂ ಓದಿ:ಗಂಗಾ ನದಿ ನೀರಿನಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇಲ್ಲ: ವಿಜ್ಞಾನಿ ಡಾ. ಅಜಯ್ ಸೋಂಕರ್ ಸ್ಪಷ್ಟನೆ