ಕರ್ನಾಟಕ

karnataka

ETV Bharat / bharat

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಟುಟೀಕೆ - H D Kumaraswamy criticized CM

ಕೇಂದ್ರದ ನೀತಿ ಆಯೋಗ ಸಭೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿರುವ ಬಗ್ಗೆ ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

Union Minister H D Kumaraswamy
ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Jul 27, 2024, 10:46 PM IST

ನವದೆಹಲಿ: ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಕಟುವಾಗಿ ಟೀಕಿಸಿದ ಕೇಂದ್ರ ಸಚಿವರು, ನೀತಿ ಆಯೋಗದ ಆಹ್ವಾನಿತ ಸದಸ್ಯ ಹೆಚ್.ಡಿ.ಕುಮಾರಸ್ವಾಮಿ ಅವರು, "ರಾಜ್ಯ ಸರಕಾರ ಕೇಂದ್ರದೊಂದಿಗೆ ನಿರಂತರವಾಗಿ ಸಂಘರ್ಷ ನಡೆಸುತ್ತಿದೆ. ಅದಕ್ಕೆ ವಿಶ್ವಾಸದ ಕೊರತೆ ಕಾರಣ" ಎಂದು ಅಭಿಪ್ರಾಯಪಟ್ಟರು.

ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿ, "ಇಂಥ ವಿಶ್ವಾಸದ ಕೊರತೆಯಿಂದ ಒಕ್ಕೂಟ ವ್ಯವಸ್ಥೆಗೆ ದಕ್ಕೆ ಉಂಟಾಗಲಿದೆ. ಇದರಿಂದ ನಾಡಿಗೆ ಸಂಕಷ್ಟ ಬರಲಿದೆ. ರಾಜ್ಯಕ್ಕೆ ಒಳ್ಳೆಯದು ಮಾಡುವ ನೈಜ ಉದ್ದೇಶ ಇದ್ದಿದ್ದರೆ ಮುಖ್ಯಮಂತ್ರಿ ಅವರು ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು" ಎಂದು ಅವರು ಹೇಳಿದರು.

ಸಂಘರ್ಷಕ್ಕೆ ಕಾಂಗ್ರೆಸ್‌ ಪಕ್ಷವೇ ನೇರ ಹೊಣೆ: "ಇಂತಹ ವಿಶ್ವಾಸ ಕೊರತೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎನ್ನುವುದರಲ್ಲಿ ಸಂಶಯ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ ಸಭೆಯನ್ನು ಕರೆದು 'ವಿಕಸಿತ ಭಾರತ'ದ ಗುರಿ ಸಾಧಿಸುವ ಬಗ್ಗೆ ಚರ್ಚಿಸಿದರು. ಅದಕ್ಕಾಗಿ ತಮ್ಮ ಮುನ್ನೋಟವನ್ನು ಸಭೆಯಲ್ಲಿ ಪ್ರಸುತ್ತಪಡಿಸಿದರು. ಕರ್ನಾಟಕವೂ ಸೇರಿ ಎಲ್ಲಾ ರಾಜ್ಯಗಳು ಭಾಗವಹಿಸಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ" ಎಂದರು.

ಕೇಂದ್ರದ ಜತೆ ಸಂಘರ್ಷ, ವಿಶ್ವಾಸದ ಕೊರತೆ ರಾಜ್ಯಕ್ಕೆ ಒಳ್ಳೆಯದಲ್ಲ: "ಸಭೆಗೆ ಎನ್​ಡಿಎ ಒಕ್ಕೂಟದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಬಂದಿದ್ದರು. ನಿತೀಶ್ ಕುಮಾರ್ ಅವರು ಆರೋಗ್ಯದ ಸಮಸ್ಯೆಯಿಂದ ಬಂದಿರಲಿಲ್ಲ. ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ, ದೆಹಲಿ, ಹಿಮಾಚಲ ಪ್ರದೇಶ, ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದರು. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅಭಿವೃದ್ಧಿ ಮತ್ತು ಆ ರಾಜ್ಯಗಳ ಜನರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಅವರು ಏನು ಸಾಧನೆ ಮಾಡುತ್ತಾರೆ. ಅನ್ಯಾಯ ಆಗಿದ್ದರೆ ಸಭೆಯಲ್ಲಿ ಬಂದು ಚರ್ಚಿಸಬೇಕಾಗಿತ್ತು. ಬೀದಿಯಲ್ಲಿ ನಿಂತು ಮಾತನಾಡಿದರೆ ಏನು ಸಿಗುತ್ತದೆ?" ಎಂದು ಬೇಸರ ವ್ಯಕ್ತಪಡಿಸಿದರು.

"ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಒಂದಲ್ಲಾ ಒಂದು ಕಾರಣಕ್ಕೆ ಸಂಘರ್ಷ ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ವಿಶ್ವಾಸದ ಕೊರತೆಯಿಂದ ಕೂಡಿದೆ. ಒಕ್ಕೂಟ ವ್ಯವಸ್ಥೆಗೆ ಇದು ಒಳ್ಳೆಯದಲ್ಲ. ಇದರಿಂದ ನಾಡಿಗೆ ಸಂಕಷ್ಟ ಬರಲಿದೆ. ಇದಕ್ಕೆ ಕಾಂಗ್ರೆಸ್‌ ಪಕ್ಷವೇ ನೇರ ಕಾರಣ" ಎಂದು ದೂರಿದರು.

ಇದನ್ನೂ ಓದಿ:ರಾಮನಗರ ಹೆಸರು ಬದಲಾವಣೆ ಮಾಡಿದವರು ಸರ್ವನಾಶ ಆಗ್ತಾರೆ: ಹೆಚ್.ಡಿ.ಕುಮಾರಸ್ವಾಮಿ ಕಿಡಿ - Union Minister H D Kumaraswamy

ಡಿಕೆಶಿಗೆ ತಿರುಗೇಟು:ಬೆಂಗಳೂರು ದಕ್ಷಿಣ ಹೆಸರನ್ನು ಬದಲಿಸುವುದು ಹೆಚ್.ಡಿ.ಕುಮಾರಸ್ವಾಮಿ ಅವರ ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವರು, "ಇಂಥ ಹೇಳಿಕೆಗಳನ್ನು ಕೊಟ್ಟವರು ಏನೇನಾಗಿದ್ದಾರೆ ಎನ್ನುವುದು ಗೊತ್ತಿದೆ" ಎಂದು ಕುಟುಕಿದರು.

ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ರಾಮನಗರದ ಹೆಸರು ಮರುಸ್ಥಾಪನೆ ಸಾಧ್ಯವಿಲ್ಲ. ಹಾಗಂತ ಡಿಸಿಎಂ ಹೇಳಿಕೆ ನೀಡಿದ್ದಾರೆ. ಹಿಂದೆ ಈ ರೀತಿಯ ಹೇಳಿಕೆಯನ್ನು ಬಹಳ ಜನ ಹೇಳಿದ್ದಾರೆ. ಆಮೇಲೆ ಅವರು ಏನೇನಾಗಿದ್ದಾರೆ ಎನ್ನುವುದನ್ನೂ ನೋಡಿದ್ದೇನೆ" ಎಂದು ಮಾರ್ಮಿಕವಾಗಿ ಹೇಳಿದರು.

"ಮುಂದಿನ ಹತ್ತು, ಇಪ್ಪತ್ತು ವರ್ಷ ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಎಂದು ಅವರು ಹೇಳಿದ್ದಾರೆ. ಇಂತಹ ಹೇಳಿಕೆ ನೀಡಿ ಒಂದೇ ವರ್ಷದಲ್ಲಿ ಹೋದವರು ಬಹಳ‌ ಜನ ಇದ್ದಾರೆ. ಈ ಸರ್ಕಾರ ಮಾಡಿರುವ ಅಕ್ರಮಗಳು, ಜನವಿರೋಧಿ ಚಟುವಟಿಕೆಗಳು ಎಷ್ಟಿವೆ ಎಂದರೆ ನಾಳೆ ಬೆಳಗ್ಗೆ ಚುನಾವಣೆ ನಡೆದರೆ ಜನರೇ ಇವರನ್ನು ಮನೆಗೆ ಕಳಿಸುತ್ತಾರೆ. ಮುಂದಿನ ಹತ್ತು ವರ್ಷದ ಆಮೇಲೆ ಇರಲಿ" ಎಂದು ಟಾಂಗ್‌ ಕೊಟ್ಟರು.

"ನಾನು ಈ ಹೇಳಿಕೆಯನ್ನು ಕಾಟಾಚಾರಕ್ಕೆ ನೀಡಿಲ್ಲ, ಇದು ನನ್ನ ಜೀವನದ ಗುರಿ. ಯಾವ ಘನಂಧಾರಿ ಕೆಲಸ ಮಾಡಿದ್ದಾರೆ ಎಂದು ಜನ ಇವರಿಗೆ ಮತ ಕೊಡುತ್ತಾರೆ? ಶಾಶ್ವತವಾಗಿ ಕೂರಲು ಗೂಟ ಹೊಡೆದುಕೊಂಡು ಇರಲಿ, ಅಲ್ಲಿರುತ್ತಾರೋ, ಇನ್ನೆಲ್ಲಿ ಇರುತ್ತಾರೋ ನೊಡೊಣ. ರಾಮನಗರದ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಅವರೇ ಪ್ರಾಯಶ್ಚಿತ ಪಡೆಬೇಕಾಗುತ್ತದೆ. ದೊಡ್ಡಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ" ಎಂದು ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ:ಹೆಚ್​ಡಿಕೆ ಸರ್ವನಾಶ ಮಾಡೋದಕ್ಕೇ ನೋಡ್ತಿದ್ದಾರೆ, ’ಮಲಗಿದ್ರು- ಎದ್ರೂ’ ಅದನ್ನೇ ಬಯಸುತ್ತಾರೆ: ಡಿ.ಕೆ. ಶಿವಕುಮಾರ್​ - D K Shivakumar reaction on HDK

ABOUT THE AUTHOR

...view details