ರಾಣಿಪೇಟೆ(ತಮಿಳುನಾಡು): ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತಮಿಳುನಾಡಿನಲ್ಲಿ ವಾಹನ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. 5 ವರ್ಷಗಳ ಅವಧಿಯಲ್ಲಿ 9,000 ಕೋಟಿ ರೂ. ಹೂಡಿಕೆ ಮಾಡಲಿದ್ದು, ಉದ್ಯೋಗಾವಕಾಶ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಇದರ ಮುಂದುವರೆದ ಭಾಗವಾಗಿ ಸಿಎಂ ಎಂ.ಕೆ.ಸ್ಟಾಲಿನ್ ಶನಿವಾರ ರಾಣಿಪೇಟ್ ಜಿಲ್ಲೆಯಲ್ಲಿ ಟಾಟಾ ಮೋಟಾರ್ಸ್ ವಾಹನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿಸಿದರು.
ಉದ್ಯೋಗಾವಕಾಶ ಹೆಚ್ಚಿಸುವ ಸಲುವಾಗಿ ತಮಿಳುನಾಡು ಸರ್ಕಾರ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಅದರಲ್ಲಿ ಈ ಯೋಜನೆ ಕೂಡ ಒಂದಾಗಿದೆ.
ಇತ್ತೀಚೆಗೆ ಚೆನ್ನೈನಲ್ಲಿ 'ವಿಶ್ವ ಹೂಡಿಕೆದಾರರ ಸಮಾವೇಶ' ನಡೆಸಲಾಗಿತ್ತು. ಸಮ್ಮೇಳನದ ಕೆಲವು ದಿನಗಳ ನಂತರ, ಟಾಟಾ ಮೋಟಾರ್ಸ್ ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಎಂ.ಕೆ.ಸ್ಟಾಲಿನ್ ಸಮ್ಮುಖದಲ್ಲಿ 9,000 ಕೋಟಿ ರೂ. ಹೂಡಿಕೆಯ ಉತ್ಪಾದನಾ ಘಟಕಕ್ಕೆ ಸಹಿ ಹಾಕಲಾಗಿತ್ತು. ಕೈಗಾರಿಕೆಗಳಿಂದ ಕೂಡಿದ ರಾಣಿಪೇಟೆ ಜಿಲ್ಲೆಯಲ್ಲಿ ಈ ಕಂಪನಿಯ ಕಾರ್ಖಾನೆ ತಲೆ ಎತ್ತಲಿದೆ ಎಂದು ಸಹ ಹೇಳಲಾಗಿತ್ತು. ಇಂದು ವಾಹನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
470 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಟಾಟಾ ಮೋಟಾರ್ಸ್ ಕಾರು ಉತ್ಪಾದನಾ ಘಟಕದ ನಿರ್ಮಾಣ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಕಾರು ತಯಾರಿಕಾ ಘಟಕದ ಸ್ಥಾಪನೆಯಿಂದ 5,000 ಜನರಿಗೆ ನೇರವಾಗಿ ಮತ್ತು 15,000ಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಟಾಟಾ ಮೋಟಾರ್ಸ್ ಕಂಪನಿಯು ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮದಡಿ 470 ಎಕರೆ ವಿಸ್ತೀರ್ಣದಲ್ಲಿ ವಾಹನ ತಯಾರಿಕಾ ಘಟಕ ಹುಟ್ಟುಹಾಕಲಿದೆ. ಇಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಯೋಜಿಸಿದೆ. ರಾಣಿಪೇಟ್ ಸ್ಥಾವರವು ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಪ್ರಮುಖ ಕೇಂದ್ರವಾಗುವ ನಿರೀಕ್ಷೆಯಿದೆ. ಇದರಿಂದ ವಿದ್ಯಾವಂತ ಪದವೀಧರರಿಗೆ ಉದ್ಯೋಗಾವಕಾಶಗಳೂ ದೊರೆಯಲಿವೆ ಎಂದು ಸರ್ಕಾರ ಈ ಹಿಂದೆಯೇ ಹೇಳಿಕೊಂಡಿತ್ತು.
ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, "ಟಾಟಾ ಮೋಟಾರ್ಸ್‌ನ ಸುಧಾರಿತ ಸ್ಥಾವರಕ್ಕೆ ಅಡಿಪಾಯ ಹಾಕಲು ನನಗೆ ಖುಷಿಯಾಗುತ್ತಿದೆ. ತಮಿಳುನಾಡು ಭಾರತದ ಪ್ರಮುಖ ಕಂಪನಿಗಳಿಗೆ ಮಾತ್ರವಲ್ಲದೇ ವಿಶ್ವದ ಕೆಲವು ಉನ್ನತ ಜಾಗತಿಕ ಸಂಸ್ಥೆಗಳಿಗೆ ಪ್ರವರ್ತಕವಾಗಿದೆ. ತಮಿಳುನಾಡಿನಲ್ಲಿ ಹೆಚ್ಚು ಹೂಡಿಕೆ ಮಾಡಲು ಟಾಟಾ ಮೋಟಾರ್ಸ್ ಸೇರಿದಂತೆ ಇತರ ಕಂಪನಿಗಳು, ಉದ್ಯಮಿಗಳು ಮುಂದೆ ಬರಬೇಕೆಂದು" ಮನವಿ ಮಾಡಿಕೊಂಡರು.
ಇದನ್ನೂ ಓದಿ:20 ಸಾವಿರ ಮಂದಿಗೆ ಉದ್ಯೋಗ: ರಾಣಿಪೇಟೆಗೆ ಬರಲಿದೆ ಟಾಟಾದ ಜಾಗ್ವಾರ್, ಲ್ಯಾಂಡ್‌ರೋವರ್ ಕಾರ್ಖಾನೆ! - Job ready for 20 thousand people