ಕೊಚ್ಚಿ,ಕೇರಳ: ವಯನಾಡು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಿರುದ್ಧ ಸೋತ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಹೈಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಮತ್ತು ತಮ್ಮ ಕುಟುಂಬದ ಆಸ್ತಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ, ಹೀಗಾಗಿ ಭಾರತೀಯ ಚುನಾವಣಾ ಆಯೋಗದ ನಿಯಮಗಳ ಉಲ್ಲಂಘನೆಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರಿದಾಸ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಚುನಾವಣಾ ಗೆಲುವನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು 4,10,931 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರಿಯಾಂಕಾ 6,22,338 ಮತಗಳನ್ನು ಪಡೆದರೆ, ಹಿರಿಯ ಸಿಪಿಐ ಮಾಜಿ ಶಾಸಕ ಸತ್ಯನ್ ಮೊಕೇರಿ 2,11,407 ಮತಗಳನ್ನು ಪಡೆದು ಎರಡನೇ ಸ್ಥಾನ ಹಾಗೂ ಹರಿದಾಸ್ ಕೇವಲ 1,09,939 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಏಪ್ರಿಲ್ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಗಳಿಸಿದ 3.60 ಲಕ್ಷ ಮತಗಳ ಗೆಲುವಿನ ಅಂತರವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತಮಗೊಳಿಸಿದ್ದರು. ರಾಹುಲ್ ಗಾಂಧಿ ರಾಯಬರೇಲಿ ಕ್ಷೇತ್ರ ಉಳಿಸಿಕೊಂಡಿದ್ದರಿಂದ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಹೀಗಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು.
2004 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತನ್ನ ತಾಯಿ ಸೋನಿಯಾ ಗಾಂಧಿ ಪರವಾಗಿ ರಾಯ್ಬರೇಲಿ ಮತ್ತು ಸಹೋದರ ರಾಹುಲ್ ಪರ ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಪ್ರಚಾರ ಕಣಕ್ಕೆ ಇಳಿದಿದ್ದರು. ಇದಾದ ಸುಮಾರು 20 ವರ್ಷಗಳ ನಂತರ ವಾದ್ರಾ ನೇರವಾಗಿ ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚುನಾಯಿತ ಪ್ರತಿನಿಧಿಯಾಗಿ ಅವರ ಚೊಚ್ಚಲ ಸಂಸತ್ ಪ್ರವೇಶವು ಕೇರಳದಲ್ಲಿ ಕಾಂಗ್ರೆಸ್‌ನ ಅಸ್ತಿತ್ವ ಗಟ್ಟಿಗೊಳಿಸುವಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಅದೃಷ್ಟವನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನು ಓದಿ:ಓಂ ಪ್ರಕಾಶ ಚೌಟಾಲಾ ನಿಧನ: ಹೀಗಿದೆ ಅವರ ಏಳು- ಬೀಳುಗಳ ಹಿನ್ನೋಟ
ಮಳೆಯಿಲ್ಲ- ಹಿಮವಿಲ್ಲ, ಆದರೆ, ಭಯಂಕರ ಚಳಿ; ಜಮ್ಮುವಿನಲ್ಲಿ ಮುಂದುವರೆದ ಕನಿಷ್ಠ ತಾಪಮಾನ