ಮೀರತ್(ಉತ್ತರ ಪ್ರದೇಶ):ಕೂದಲು ಉದುರುವಿಕೆ, ಬೋಳು ತಲೆ ಸಮಸ್ಯೆಯು ಈಗಿನ ಜನರನ್ನು ಬಹುವಾಗಿ ಕಾಡುತ್ತಿದೆ. ಈ ತೈಲ ಹಚ್ಚಿದರೆ ಕೂದಲು ಸಮಸ್ಯೆ ಇಲ್ಲವಾಗುತ್ತದೆ ಎಂಬ ಜಾಹೀರಾತು ಕಂಡರೆ ಸಾಕು ಅದನ್ನು ಖರೀದಿಸಲು ಜನರು ಮುಗಿಬೀಳುತ್ತಾರೆ. ಉತ್ತರ ಪ್ರದೇಶದ ಮೀರತ್ನಲ್ಲೂ ಇಂಥದ್ದೇ ಒಂದು ಘಟನೆ ನಡೆಯಿತು.
'ವಿಶೇಷ' ಆಯಿಲ್ ಹಚ್ಚಿದರೆ ತಲೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ ಎಂದು ವ್ಯಕ್ತಿಗಳಿಬ್ಬರು ಪ್ರಚಾರ ನಡೆಸಿದ್ದು, ಅದನ್ನು ಖರೀದಿಸಲು ಜನರು ದುಂಬಾಲು ಬಿದ್ದಿದ್ದಾರೆ. ತೈಲಕ್ಕಾಗಿ ದೊಡ್ಡ ಸರತಿ ಸಾಲು ಸೃಷ್ಟಿಯಾಗಿದೆ. ಇದರಿಂದ ವಾಹನದಟ್ಟಣೆಯೂ ಉಂಟಾಗಿದ್ದು, ಅದರಲ್ಲಿ ಆಂಬ್ಯುಲೆನ್ಸ್ ಸಿಲುಕಿಕೊಂಡಿದೆ.
ಘಟನೆಯ ವಿವರ:ಮೀರತ್ನಲ್ಲಿ ವ್ಯಕ್ತಿಗಳಿಬ್ಬರು ಯಾವುದೋ ತೈಲವನ್ನು ತಂದು ಇದು ತಲೆ ಕೂದಲಿನ ಸಮಸ್ಯೆಗೆ ರಾಮಬಾಣ ಎಂದು ಪ್ರಚಾರ ಮಾಡಿದ್ದಾರೆ. ಇದನ್ನು ಕೇಳಿದ್ದೇ ತಡ ಜನರು ಆಯಿಲ್ ಖರೀದಿಸಲು ಮತ್ತು ಅದನ್ನು ಹಚ್ಚಿಕೊಳ್ಳಲು ಮುಗಿಬಿದ್ದಿದ್ದಾರೆ.
ಈ ತೈಲವನ್ನು ಲೇಪಿಸಿದ 8 ದಿನದಲ್ಲಿ ಬೋಳು ತಲೆಯಲ್ಲಿ ಕೂದಲು ಬರುತ್ತದೆ ಎಂದು ಪ್ರಚಾರಕರು ಆಶ್ವಾಸನೆ ನೀಡಿದ್ದಾರೆ. ಸ್ಥಳದಲ್ಲೇ ಎಣ್ಣೆ ಹಚ್ಚಲು 20 ರೂಪಾಯಿ ಶುಲ್ಕ ಪಡೆದಿದ್ದಾರೆ. 300 ರೂಪಾಯಿಗೆ ಒಂದು ಬಾಟಲಿಯಂತೆ ಮಾರಾಟ ಮಾಡಿದ್ದಾರೆ.
ತಲೆ ಬೋಳಿಸಿಕೊಂಡು ಬಂದ ಜನರು!:ತೈಲವನ್ನು ಲೇಪನ ಮಾಡಬೇಕಾದರೆ, ತಲೆಯ ಮೇಲೆ ಕೂದಲು ಇರಬಾರದು ಎಂದು ಸಲಹೆ ನೀಡಿದ್ದರಿಂದ ಹಲವರು ಇದ್ದ ಕೂದಲನ್ನೂ ಬೋಳಿಸಿಕೊಂಡು ಬಂದಿದ್ದಾರೆ. ಬೋಳು ತಲೆಗೆ ಸ್ಥಳದಲ್ಲೇ ತೈಲ ಲೇಪನ ಮಾಡಿ ಹಣ ಪೀಕಿ ಪರಾರಿಯಾಗಿದ್ದಾರೆ.
ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ಆಂಬ್ಯುಲೆನ್ಸ್:ಈ ಸುದ್ದಿ ನಗರದಲ್ಲಿ ಹಬ್ಬಿದ್ದರಿಂದ ಜನಸಂದಣಿ ಹೆಚ್ಚಿದೆ. ವಿಶೇಷ ತೈಲಕ್ಕಾಗಿ ಜನರು ಉದ್ದನೆಯ ಸರತಿ ಸಾಲು ಕಟ್ಟಿದ್ದರಿಂದ ವಾಹನದಟ್ಟಣೆ ಉಂಟಾಗಿದೆ. ಈ ವೇಳೆ ಆಂಬ್ಯುಲೆನ್ಸ್ ವಾಹನಗಳ ಮಧ್ಯೆ ಸಿಲುಕಿಕೊಂಡಿದೆ.
'8 ದಿನದಲ್ಲಿ ಕೂದಲು ಬೆಳೆಯುತ್ತೆ':ಈ ವಿಶೇಷ ತೈಲವನ್ನು ಲೇಪನ ಮಾಡಿದರೆ, 8 ದಿನದಲ್ಲಿ ಬೋಳು ತಲೆಯಲ್ಲಿ ಕೂದಲು ಬೆಳೆಯುತ್ತದೆ. ಇದನ್ನು ನಾನು ಪ್ರಯೋಗ ಮಾಡಿ ನೋಡಿದ್ದೇನೆ ಎಂದು ಸಲ್ಮಾನ್ ಬಿಜ್ನೋರ್ ಎಂಬಾತ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.
ವಿಶೇಷ ತೈಲದ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು, ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. 'ವಿಶೇಷ ತೈಲ' ಪ್ರಚಾರ ನಡೆಸಿದ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಿರುವ ಅಧಿಕಾರಿಗಳು ಇಂತಹ ವದಂತಿಗಳಿಗೆ ಕಿವಿಗೊಡಬಾರದು. ತಲೆ ಕೂದಲು ಸಮಸ್ಯೆ ಇದ್ದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಂಬೇಡ್ಕರ್ರನ್ನು ಅಮಿತ್ ಶಾ ಅವಮಾನಿಸಿಲ್ಲ, ಕಾಂಗ್ರೆಸ್ನ ಕುತಂತ್ರವನ್ನು ಬಯಲಿಗೆಳೆದಿದ್ದಾರೆ: ಪ್ರಧಾನಿ ಮೋದಿ